ಹಾಸನ: ಇಡೀ ರಾಜ್ಯದಲ್ಲಿ ಬಿಜೆಪಿ ಹಾಗೂ ದಳದಲ್ಲಿ ಗುರುತಿಸಿಕೊಂಡವರು ನಮ್ಮ ಪಕ್ಷದ ಸದಸ್ಯರಾಗುತ್ತಿದ್ದು, ನಮಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಹಲವಾರು ಮಂದಿ ಅರ್ಜಿ ಹಾಕಿದ್ದಾರೆ ಎಂದು ತಿಳಿಸಿದರು.
ಜನ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಫಲಿತಾಂಶ ನಂತರವೂ 30 ಲಕ್ಷ ಸದಸ್ಯರು ನೋಂದಣಿ ಆಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರಲು ಅವರೆಲ್ಲ ಸದಸ್ಯರಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ನಾವು ಹೇಳಬೇಕಾಗಿಲ್ಲ. ವಿಶ್ವನಾಥ್, ಕೆಂಪಣ್ಣ ಅವರೆಲ್ಲರೂ ಹೇಳಿದ್ದಾರೆ ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್, ರಸಗೊಬ್ಬರ ಸೇರಿದಂತೆ ಎಲ್ಲದರ ಬೆಲೆ ಏರಿಕೆ ಆಗಿದ್ದು, ಬಿಜೆಪಿ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಇದನ್ನ ಜನ ಅರ್ಥ ಮಾಡಿಕೊಂಡಿದ್ದು, ಚುನಾವಣೆ ಬರಲಿ, ಅವಕಾಶ ಸಿಗಲಿ ಎಂದು ಕಾಯುತ್ತಿದ್ದಾರೆ ಎಂದು ತಿಳಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ರಾಗಿ, ಜೋಳ, ತೊಗರಿ ಸೇರಿದಂತೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಬದಲಿಗೆ ಸರ್ಕಾರ ಖರೀದಿಗೆ ಮಿತಿ ಹೇರಿದೆ. ನಮ್ಮ ರಾಜ್ಯದವರೇ ಕೃಷಿ ಸಚಿವರಾಗಿದ್ದರೂ, ಅನ್ಯಾಯ ಮುಂದುವರಿದಿದೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಎಲ್ಲ ಕಡೆ 144 ಸೆಕ್ಷನ್ ಹಾಕಿದರೆ ಯಾರು ವ್ಯಾಪಾರ ಮಾಡುತ್ತಾರೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ನಮ್ಮ ಮಾನವ ಸಂಪನ್ಮೂಲ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದೆ.
ಅಲ್ಪಸಂಖ್ಯಾತ ವ್ಯಾಪಾರಿಗಳನ್ನು ನಿರ್ಬಂಧಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಅದು ಬಿಜೆಪಿ ಅಜೆಂಡಾ. ರೈತರನ್ನು ಬದುಕಿರುವಾಗಲೇ ಸಮಾಧಿ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಜಲಧಾರೆ ವಿಚಾರವಾಗಿ ಪ್ರಶ್ನೆ ಕೇಳಿದಾಗ ‘ಬಹಳ ಸಂತೋಷ. ಒಳ್ಳೆಯದಾಗಲಿ. ಇದರಿಂದ ನಮ್ಮ ರಾಜ್ಯದ ರೈತರಿಗೆ ಅನುಕೂಲ ಆಗಬೇಕು. ಅವರ ಜಲಧಾರೆ ಎಲ್ಲಕಡೆ ಸಾಗಲಿ. ಅವರ ಕಾರ್ಯಕ್ರಮ ಯಶಸ್ವಿಯಾಗಲಿ. ನಮ್ಮ ತಕರಾರಿಲ್ಲ ಎಂದು ಹೇಳಿದರು
ಚುನಾವಣೆ ನಂತರ ಮೈತ್ರಿ ಮಾಡಿಕೊಳ್ಳುವ ಆಲೋಚನೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ, ನಾವು ನಮ್ಮ ಕಾಲ ಮೇಲೆ, ಸ್ವಂತ ಬಲದ ಸರ್ಕಾರ ರಚನೆ ಮಾಡುತ್ತೇವೆ. ಜನ ಕಾಂಗ್ರೆಸ್ ಸರ್ಕಾರ ಬರಬೇಕು ಎಂದು ಅಪೇಕ್ಷಿಸುತ್ತಿದ್ದಾರೆ ಎಂದು ಡಿಕೆಶಿ ಉತ್ತರಿಸಿದರು.
ಹಾಸನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವೆಲ್ಲ ನಾಯಕರು ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ ಎಂಬ ಪ್ರಶ್ನೆಗೆ, ನಮಗೆ ದೊಡ್ಡ ನಾಯಕರುಗಳೇ ಬರಬೇಕು ಎಂಬ ನಿರೀಕ್ಷೆ ಇಲ್ಲ. 5-10 ಮತಗಳಿಂದ 2-3 ಸಾವಿರ ಮತಗಳನ್ನು ತರುವ ಕಾರ್ಯಕರ್ತರು ಪಕ್ಷ ಸೇರಿದರೆ ಸಾಕು ಎಂದು ತಿಳಿಸಿದರು.