ವಿಜಯನಗರ: ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ
ನಡೆದಿದೆ.
ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ವೆಂಕಟ್ ಪ್ರಶಾಂತ್ (42), ಪತ್ನಿ ಚಂದ್ರಕಲಾ (38), ಮಕ್ಕಳಾದ ಆದ್ವಿಕ್ (16), ಪ್ರೇರಣಾ (14) ಮೃತಪಟ್ಟಿದ್ದಾರೆ.
ಮರಿಯಮ್ಮನಹಳ್ಳಿ ಪಟ್ಟಣದ 5ನೆ ವಾರ್ಡ್ ನಲ್ಲಿ ಕಿರಾಣಿ ವರ್ತಕರಾದ ರಾಘವೇಂದ್ರಶೆಟ್ಟಿ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ.
ಕೆಳಮಹಡಿಯಲ್ಲಿ ರಾಘವೇಂದ್ರಶೆಟ್ಟಿ ಮತ್ತು ಪತ್ನಿ ರಾಜೇಶ್ವರಿ ಅವರು ವಾಸವಾಗಿದ್ದು, ಮನೆಯ ಮೇಲಿನ ಕೊಠಡಿಯಲ್ಲಿ ಮಗ, ಸೊಸೆ, ಮೊಮ್ಮಕ್ಕಳು ಇದ್ದರು.
ಶುಕ್ರವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೃಹದಾಕಾರವಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಕೆಳಮಹಡಿಯಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿ ಮತ್ತು ಅವರ ಪತ್ನಿ ರಾಜೇಶ್ವರಿ ಮನೆಯಿಂದ ಹೊರಗೆ ಓಡಿ ಬಂದು ಕೂಗಿಕೊಂಡಿದ್ದಾರೆ.
ಆದರೆ, ಮೇಲಿನ ಕೊಠಡಿಯಲ್ಲಿ ಮಲಗಿದ್ದವರು ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಮರಿಯಮ್ಮನಹಳ್ಳಿ ಠಾಣೆ ಪಿಎಸ್‍ಐ, ಅಗ್ನಿಶಾಮಕ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಕೂಡ್ಲಿಗಿ ಉಪವಿಭಾಗದ ಡಿಎಸ್‍ಪಿ, ಗುಡೇಕೋಟೆಯ ಪಿಎಸ್‍ಐ, ಹಗರಿಬೊಮ್ಮನಹಳ್ಳಿಯ ಸಿಪಿಐ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹವಾನಿಯಂತ್ರಿತ ಸಾಧನ ಸ್ಫೋಟಗೊಂಡು ಬೆಂಕಿ ಹತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.