ಗೌರಿಬಿದನೂರು: ದಿನಕ್ಕೊಬ್ಬನ ಜತೆ ಚಕ್ಕಂದವಾಡುತ್ತಿದ್ದ ಇಬ್ಬರು ಮಕ್ಕಳ ತಾಯಿ ಹಳೆ ಪ್ರೇಮಿಯಿಂದ ಬಚಾವಾಗಲು
ಇನ್ನೊಬ್ಬ ಪ್ರಿಯಕರನ ಜತೆ ಸೇರಿ ಸಿನಿಮೀಯ ರೀತಿಯಲ್ಲಿ ಆತನನ್ನು ಕೊಂದು ಅಪಘಾತದ ದೃಶ್ಯ ಸೃಷ್ಟಿಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಹಿಂದೂಪುರ ತಾಲೂಕಿನ ಗೊಳ್ಳಾಪುರಂ ವಾಸಿ ಪ್ರಸನ್ನಕುಮಾರ್ ಕೊಲೆಯಾದ ವ್ಯಕ್ತಿ.
ಈ ಪ್ರಕರಣ ಹಿಂದೂಪುರ ತಾಲೂಕಿನ ಗೊಳ್ಳಾಪುರಂನಲ್ಲಿ ನಡೆದಿದೆ.
ಮೋಜು-ಮಸ್ತಿ ಮಾಡುತ್ತಿದ್ದ ಮಹಿಳೆ ಪವಿತ್ರ (29) ಹಾಗೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪವಿತ್ರಳ ಎರಡನೆ ಪ್ರಿಯಕರ ರಿಶಬ್ ಹಾಗೂ ಕ್ಯಾಂಟರ್ ಚಾಲಕ ಶಂಭುಲಿಂಗ ಬಂಧಿತ ಆರೋಪಿಗಳು.
2021ರ ನವೆಂಬರ್ 25 ರಂದು ರಾಷ್ಟ್ರೀಯ ಹೆದ್ದಾರಿ-234ರ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಪುರ ಗ್ರಾಮದ ಹೆದ್ದಾರಿ ಪಕ್ಕದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಗೌರಿಬಿದನೂರು ಪೊಲೀಸ್ ಇನ್ ಸ್ಪೆಕ್ಟರ್ ಶಶಿಧರ್ ಹಾಗೂ ಸಿಬ್ಬಂದಿ, ಪರಿಶೀಲನೆ ನಡೆಸಿದಾಗ ಅಪಘಾತವೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡಿತ್ತು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಕೊಲೆಯಾಗಿರುವ ಯುವಕ ಅನಂತಪುರ ಜಿಲ್ಲೆ, ಹಿಂದೂಪುರ ತಾಲೂಕಿನ ಗೋಳಾಪುರ ನಿವಾಸಿ ಪ್ರಸನ್ನಕುಮಾರ್ (25) ಎಂಬುದು ಗೊತ್ತಾಗಿದೆ.
ಇದು ಅಪಘಾತವಲ್ಲ ಯುವಕನನ್ನು ಎಲ್ಲೊ ಕೊಲೆ ಮಾಡಿ ಶವ ತಂದು ಹಾಕಲಾಗಿದೆ ಎಂಬ ಮಾಹಿತಿ ದೊರೆತು ತಕ್ಷಣ ಪೊಲೀಸರು ತನಿಖೆ ತೀವ್ರಗೊಳಿಸಿ ಮಾಹಿತಿ ಕಲೆ ಹಾಕಿದಾಗ ಪವಿತ್ರಳ ತ್ರಿಕೋನ ಪ್ರೇಮ ಪ್ರಕರಣ ಬಯಲಾಗಿತ್ತು.
ಪ್ರಸನ್ನಕುಮಾರ್ ಕೊಲೆಯ ಜಾಡು ಹಿಡಿದು ಹೊರಟ ಗೌರಿಬಿದನೂರು ಹಾಗೂ ಮಂಚೇನಹಳ್ಳಿ ಪೆಪೊಲೀಸರು, ಪ್ರಸನ್ನಕುಮಾರ್ ಜೊತೆ ಸಂಪರ್ಕದಲ್ಲಿದ್ದ ಪವಿತ್ರಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಪವಿತ್ರ ಹಿಂದೂಪುರ ಕೈಗಾರಿಕಾ ವಲಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಪ್ರಸನ್ನಕುಮಾರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.
ನಂತರ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೆ ಕೆಲಸ ಮಾಡುತ್ತಿದ್ದ ಉತ್ತರಭಾರತ ಮೂಲದ ರಿಶಬ್ ಎಂಬಾತನ ಜೊತೆಗೂ ಸಂಬಂಧ ಇಟ್ಟುಕೊಂಡಿದ್ದಳು.
ಇದರಿಂದ ಕೆರಳಿದ ಪ್ರಸನ್ನ ಪವಿತ್ರಳನ್ನು ಫಾಲೋ ಮಾಡುತ್ತಿದ್ದ. ಆತನಿಂದ ತಪ್ಪಿಸಿಕೊಳ್ಳಲು ಆಕೆ ನೂತನ ಪ್ರಿಯಕರ ರಿಶಬ್‍ಗೆ ಹೇಳಿದ್ದಾಳೆ.
ನಂತರ ಪ್ರಸನ್ನಕಕುಮಾರ್‍ನನ್ನು ಕರೆಸಿಕೊಂಡು ರಿಶಬ್ ಜೊತೆ ಸೇರಿ ಪ್ರಸನ್ನಕುಮಾರ್‍ನನ್ನು ಹಿಂದೂಪುರದ ಬಳಿಯೇ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಕ್ಯಾಂಟರ್‍ವೊಂದರಲ್ಲಿ ಶವ ಹಾಗೂ ಆತನ ಬೈಕ್ ತಂದು ಗೌರಿಬಿದನೂರು ತಾಲೂಕಿನ ಪುರದ ಬಳಿ ಬಿಸಾಡಿ ಹೊಗಿದ್ದರು.
ಶವ ಬಿಸಾಡಿದ ನಂತರ ಇವರಿಬ್ಬರು ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ದಿನಕ್ಕೊಂದು ಕಡೆ ಪ್ರವಾಸ ಮಾಡುತ್ತಿದ್ದರು.
ಇವರ ಮೇಲೆ ತೀವ್ರ ನಿಗಾ ಇರಿಸಿದ ಪೊಲೀಸರು ಈ ಜೋಡಿಯನ್ನು ಡಾಬಸ್‍ಪೇಟೆ ಬಳಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.