ಹುಣಸೂರು: ರೈತರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದಾಗುವ ಅನುಕೂಲಗಳು ಹಾಗೂ ಯಾವ ರೀತಿ ಸಂಪರ್ಕ ಪಡೆದುಕೊಳ್ಳಬಹುದು ಎಂಬುದರ ಕುರಿತು ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಡಿ.ಗಿರೀಶ್ ಅವರು ತಿಳಿಸಿಕೊಟ್ಟರು.
ಹುಣಸೂರು ತಾಲ್ಲೂಕಿನ ಹೆಗ್ಗಂದೂರು ಗ್ರಾಮ ಪಂಚಾಯಿತಿಯ ವಡ್ಡಂಬಾಳು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳಿಗೆ ಮಾಡಬೇಕಾದ ಕೆಲಸ ಕಾಮಗಾರಿಗಳ ಬಗ್ಗೆ ದುಡಿಯೋಣ ಬಾ ಕಾರ್ಯಕ್ರಮವು ಏಪ್ರಿಲ್, ಮೇ, ಜೂನ್ ವರೆಗೂ ನಡೆಯಲಿದೆ.
ಈ ಅವಧಿಯಲ್ಲಿ ಗ್ರಾಮದ ಬಹಳಷ್ಟು ಕುಟುಂಬಗಳು ಜಾಬ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.
ಜಾಬ್ ಕಾರ್ಡ್ ಹೊಂದಿದ ಕುಟುಂಬಗಳು ಮಾತ್ರ ನರೇಗಾ ಯೋಜನೆಯಡಿ ಜಾರಿಗೆ ಬರುವ ಯೋಜನೆಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಹಾಗಾಗಿ ಈ ಮೂರು ತಿಂಗಳಲ್ಲಿ ಜಾಬ್ ಕಾರ್ಡ್ ನೀಡುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕೆಂದು ಗಿರೀಶ್ ಸೂಚಿಸಿದರು.
ಅಂಗವಿಕಲರಿಗೂ ವಿಶೇಷ ಸೌಲಭ್ಯಗಳನ್ನು ಈ ಯೋಜನೆಯಡಿ ನೀಡಲಿದ್ದು, ಅವುಗಳನ್ನು ಕೈಬಿಡದೇ ಈ ಯೋಜನೆಯಲ್ಲಿರುವ ಸೌಲಭ್ಯಗಳನ್ನು ತಲುಪಿಸುವಂತೆ ಗ್ರಾಮ ಪಂಚಾಯಿತಿಯವರು ಕಾರ್ಯನಿರತರಾಗಬೇಕೆಂದು ಹೇಳಿದರು.
ಜಾಬ್ ಕಾರ್ಡ್ ಹೊಂದುವುದರಿಂದ ವೈಯಕ್ತಿಕವಾಗಿ ಸಾಕಷ್ಟು ಅನುಕೂಲಗಳಿದ್ದು, ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಎರೆಹುಳು ತೊಟ್ಟಿಯಂತಹ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಜಾಬ್ ಕಾರ್ಡ್ ಅತೀ ಅವಶ್ಯಕ.
ಹಾಗಾಗಿ ಮೊದಲು ಜಾಬ್ ಕಾರ್ಡ್ ಪಡೆದುಕೊಳ್ಳಿರಿ ಎಂದು ಅವರು ಸಲಹೆ ನೀಡಿದರು.
ನರೇಗಾ ಯೋಜನೆಯಲ್ಲಿ ರೇಷ್ಮೆ ಬೆಳೆದರೆ, ಒಂದು ಲಕ್ಷದ ಇಪ್ಪತ್ತು ಸಾವಿರದವರೆಗೂ ಧನ ಸಹಾಯ ದೊರೆಯಲಿದೆ. ಒಂದು ಎಕರೆಯಲ್ಲಿ ರೇಷ್ಮೆ ಬೆಳೆಯಲು ಹಣಕಾಸಿನ ನೆರವು ದೊರೆಯುವುದು.
ಅಷ್ಟೇ ಅಲ್ಲದೇ ಸಮುದಾಯ ಕಾಮಗಾರಿಗಳ ಮೂಲಕ ನೀವು ಸದೃಢರಾಗಬಹುದಾಗಿದ್ದು, ನಿಮ್ಮ ಸಹಕಾರದಿಂದ ಗ್ರಾಮಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.
ಹೆಚ್.ಡಿ.ಲೋಕೇಶ್, ಮಹದೇವ್, ವಸಂತ್ ಕುಮಾರ್ ಸೇರಿದಂತೆ ತಾಲ್ಲೂಕು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.