ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದಲ್ಲಿ ಹುಡುಗಿ ಮೇಲೆ ಮೂವರು ಕಾಮುಕರು ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ.
ಸೋಮವಾರ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿನಿ ತನ್ನ ಪ್ರಿಯಕರನ ಜೊತೆ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದ ಬೆಟ್ಟಗುಡ್ಡಗಳತ್ತ ತೆರಳಿದ್ದಳು.
ಪ್ರಿಯಕರ ನಾರಾಯಣಸ್ವಾಮಿ ತನ್ನ ಸ್ನೇಹಿತ ಮಂಜು ಜೊತೆ ಬೈಕ್ ನಲ್ಲಿ ಡ್ರಾಪ್ ಪಡೆದುಕೊಂಡಿದ್ದ. ಇತ್ತ ಹುಡುಗಿ ಹಾಗೂ ಪ್ರಿಯಕರ ನಿರ್ಜನ ಪ್ರದೇಶದಲ್ಲಿ ಇದ್ದದ್ದನ್ನು ಕಂಡು ಪ್ರಿಯಕರನ ಸ್ನೇಹಿತ ಮಂಜು ಅಲ್ಲಿಯೇ ಮದ್ಯಪಾನದಲ್ಲಿ ತೊಡಗಿದ್ದ.
ಮಂಜು ಸ್ನೇಹಿತರಾದ ನಾಗರಾಜು, ಸುರೇಶ್ ಸೇರಿ ಪ್ರೇಮಿಗಳ ಸರಸ ಸಲ್ಲಾಪದ ವೀಡಿಯೋ ರೆಕಾರ್ಡ್ ಮಾಡಿಕೊಂಡು ತಮಗೂ ಸಹಕರಿಸುವಂತೆ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡಿದ್ದಾರೆ.
ಈ ವೇಳೆ ನಾರಾಯಣಸ್ವಾಮಿ ಅಲ್ಲಿಂದ ಓಡಿ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ.
ಕೂಡಲೇ ಸ್ಥಳೀಯರು ಬೆಟ್ಟದ ಕಡೆಗೆ ಹೋಗಿ ಹುಡುಗಿಯನ್ನು ರಕ್ಷಣೆ ಮಾಡಿ ಮೂವರು ಯುವಕರನ್ನು ಹಿಡಿದಿದ್ದಾರೆ.
ನಂತರ ಹುಡುಗಿ, ನಾರಾಯಣಸ್ವಾಮಿ ಸೇರಿದಂತೆ ಮೂವರು ಯುವಕರನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಹುಡುಗಿಯನ್ನು ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ನೀಡಲಾಗಿದೆ.
ನಾರಾಯಣಸ್ವಾಮಿ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಚಿಕ್ಕಬಳ್ಳಾಪುರ ನಗರ ಠಾಣೆಗೆ ಕರೆತರಲಾಗಿದೆ.
2 ವರ್ಷಗಳಿಂದ ಹುಡುಗಿ ಹಾಗೂ ನಾರಾಯಣಸ್ವಾಮಿ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.