ಔಷಧಿ ಘಟಕದಲ್ಲಿ ಅಗ್ನಿ ಅವಘಡ: 6 ಮಂದಿ ಸಜೀವ ದಹನ

ಆಂಧ್ರಪ್ರದೇಶ : ಅನಿಲ ಸೋರಿಕೆಯಿಂದ ರಿಯಾಕ್ಟರ್ ಸ್ಫೋಟಗೊಂಡು ಔಷಧಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿ ಕಾರ್ಮಿಕರು ಸಜೀವ ದಹನವಾಗಿರುವ ಘಟನೆ‌ ಆಂಧ್ರಪ್ರದೇಶದಲ್ಲಿ ನಡೆದಿದೆ.

ಈ ಅವಘಡದಲ್ಲಿ 13 ಮಂದಿ ಗಾಯಗೊಂಡಿದ್ದಾರೆ.

ಉದುರುಪತಿ ಕೃಷ್ಣಯ್ಯ, ಬಿ. ಕಿರಣ್ ಕುಮಾರ್, ಕಾರು ರವಿ ದಾಸ್, ಮನೋಜ್ ಕುಮಾರ್, ಸುವಾಸ್ ರವಿ ದಾಸ್ ಮತ್ತು ಹಬ್ದಾಸ್ ರವಿ ದಾಸ್ ಮೃತಪಟ್ಟಿರುವ ದುರ್ದೈವಿಗಳು.

ಏಲೂರು ಜಿಲ್ಲೆಯ ಅಕ್ಕಿರೆಡ್ಡಿಗುಡೆಂನಲ್ಲಿ ಈ ಘಟನೆ ನಡೆದಿದೆ.

ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟ 6 ಮಂದಿಯಲ್ಲಿ ನಾಲ್ವರು ಬಿಹಾರದಿಂದ ವಲಸೆ ಬಂದ ಕಾರ್ಮಿಕರು.

ಬೆಂಕಿಯನ್ನು ಹತೋಟಿಗೆ ತರಲು ಎರಡು ಗಂಟೆ ಬೇಕಾಯಿತು. ಘಟನಾ ಸ್ಥಳಕ್ಕೆ  ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ ಭಢಟಿ ನೀಡಿ ಪರಿಶೀಲಿಸಿದರು.

ಅನಿಲ ಸೋರಿಕೆಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಳುಗಳಿಗೆ 2ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.