ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸೂಕ್ತ ತನಿಖೆಗೆ ಹೆಚ್.ಡಿ.ಕೆ ಆಗ್ರಹ

ರಾಮನಗರ: ಗುತ್ತಿಗೆದಾರ ಸಂತೋಷ್‌ ಸಾವಿನ ಹಿಂದೆ ಅನೇಕ ಅನುಮಾನಗಳು ಮನೆ ಮಾಡಿದ್ದು, ಸೂಕ್ತ ತನಿಖೆ ನಡೆಸುವ ಮೂಲಕ ಜನರ ಮುಂದೆ ಸತ್ಯಾಂಶವನ್ನು ಬಿಚ್ಚಿಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ

ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿ‌ ನಿಧಿಗಳ ಜತೆ ಮಾತನಾಡಿದ ಅವರು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವುದು ಉತ್ತಮ ಎಂದು ಹೇಳಿದರು.

ಅವರು ಇವತ್ತು ಅಥವಾ ನಾಳೆ ರಾಜೀನಾಮೆ ಕೊಡಬಹುದು. ಅವರ ಹೈಕಮಾಂಡ್ ಈ ಬಗ್ಗೆ ಹೇಳುತ್ತಾರೆ ಅನ್ನಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮೊದಲು ಅವರು ರಾಜೀನಾಮೆ ನೀಡುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟರು.

ಸಂತೋಷ್ ಸಾವಿನ ಹಿಂದೆ ಹಲವಾರು ಸಂಶಯಗಳಿವೆ.‌ ಜನರಲ್ಲಿ ಅನೇಕ ಪ್ರಶ್ನೆಗಳೂ ಮೂಡಿವೆ. ಸತ್ಯಾಂಶವನ್ನು ಹೊರ ತರಲು ತನಿಖೆಯಾಗಬೇಕು. ಇದು ಸರಕಾರದ ಜವಾಬ್ದಾರಿ ಎಂದು ಅವರು ಹೇಳಿದರು.

ಸಂತೋಷ್ ನಾಲ್ಕು ಕೋಟಿ ರೂಪಾಯಿ ಕಾಮಗಾರಿಯನ್ನ ಸರಕಾರದ ಕಾರ್ಯಾದೇಶ ಇಲ್ಲದೆ, ವರ್ಕ್ ಎಸ್ಟಿಮೇಟ್‌‌ ಇಲ್ಲದೇ ಕೆಲಸ ಮಾಡಿದ್ದು ಹೇಗೆ, ಅವರಿಗೆ ಕಾಮಗಾರಿ ಮಾಡಲು ಅನುಮತಿ ಕೊಟ್ಟವರು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಯಾವ ಎಂಜಿನಿಯರ್ ಅಥವಾ ಸರಕಾರಿ ಸಂಸ್ಥೆ ಗಮನಕ್ಕೆ ಬಾರದೇ ಪೇಮೆಂಟ್ ನೀಡಬೇಕು ಎಂದರೆ ತಾಂತ್ರಿಕ ಸಮಸ್ಯೆ ಇದೆ. ಇದರ ನಡುವೆ ಪರ್ಸೆಂಟೆಜ್ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದು ಎಚ್ ಡಿ ಕೆ ತಿಳಿಸಿದರು.

ಸರಕಾರ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನು ನೇಮಿಸಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾದ ಸಂದರ್ಭದಲ್ಲಿ ಬಿಜೆಪಿ ದಂಡೇ ಅಲ್ಲಿಗೆ ಹೋಯಿತು. ಇದಕ್ಕೆ ನಾವೇನು ಕಡಿಮೆ ಎಂದು ಸಾವಿನ ರಾಜಕಾರಣ ಮಾಡಲಿಕ್ಕೆ ಕಾಂಗ್ರೆಸ್‌ನ ನಾಯಕರ ದಂಡೇ ಈಗ ಸಂತೋಷ್ ಅವರ ಮನೆಗೆ ದಾಂಗುಡಿ ಇಟ್ಟಿದೆ ಎಂದು ಟೀಕಿಸಿದರು.

ಇವರೆಲ್ಲ ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಇವತ್ತು ನಾಯಕರೆಲ್ಲ ಕೈಕಟ್ಟಿ ಆ ಸಂತ್ರಸ್ತ ಹೆಣ್ಣುಮಗಳ ಮುಂದೆ ಕುಳಿತ ದೃಶ್ಯಗಳನ್ನು ನೋಡಿದರೆ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ಬಿಟ್ಟರೆ ಬೇರೇನೂ ಕಾಣದು ಎಂದು ಕುಮಾರಸ್ವಾಮಿ ಅವರು ಸಂಶಯ ವ್ಯಕ್ತಪಡಿಸಿದರು.