ಬೆಳಗಾವಿ : ಉಪನ್ಯಾಸಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಉಪನ್ಯಾಸಕನಿಗೆ ಕಾಲೇಜಿನ ಸ್ಟಾಫ್ ರೂಮ್‍ನಲ್ಲಿ ಉಪನ್ಯಾಸಕಿಯರೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಏಪ್ರಿಲ್ 12ರಂದು ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಆರೋಪಿಯನ್ನು ಅಮಿತ್ ಬಸವಮೂರ್ತಿ ಎಂದು ಗುರುತಿಸಲಾಗಿದೆ.
ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಬಸವಮೂರ್ತಿ, ಪ್ರತಿ ದಿನ ಮದ್ಯ ಸೇವಿಸಿ ಕಾಲೇಜಿಗೆ ಆಗಮಿಸಿ ಉಪನ್ಯಾಸಕಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ.
ಅಲ್ಲದೇ ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಉಪನ್ಯಾಸಕಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಹೀಗಾಗಿ ಉಪನ್ಯಾಸಕಿಯರೆಲ್ಲಾ ಸೇರಿ ಆರೋಪಿಗೆ ಕಾಲಿನಿಂದ ಒದ್ದು, ಚಪ್ಪಲಿ ಹಾಗೂ ಕೋಲಿನಿಂದ ಧರ್ಮದೇಟು ನೀಡಿದ್ದಾರೆ.
ಉಪನ್ಯಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಪನ್ಯಾಸಕಿಯರು ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.