ಐದು ವರ್ಷಗಳ ಬಳಿಕ ಅದ್ದೂರಿಯಾಗಿ ನಡೆದ ಬಿಳಿಗಿರಿರಂಗಪ್ಪನ ಜಾತ್ರೆ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಸುಪ್ರಸಿದ್ದ ದಾರ್ಮಿಕ‌ಕ್ಷೇತ್ರ ಬಿಳಿಗಿರಿರಂಗನಬೆಟ್ಟದಲ್ಲಿ

ಬಿಳಿಗಿರಿರಂಗಸ್ವಾಮಿ ರಥೋತ್ಸವ ಲಕ್ಷಾಂತರ ಜನರ ಮದ್ಯೆ ವಿಜೃಂಭಣೆಯಿಂದ ಜರುಗಿತು.

ಕಳೆದ ನಾಲ್ಕೈದು ವರ್ಷಗಳಿಂದ ರಥ ದುರಸ್ಥಿಯಲ್ಲಿದ್ದುದು ಹಾಗೂ ಕೊರೊನದಿಂದಾಗಿ ಸರಳ ಸಾಂಪ್ರಾದಾಯಿಕವಾಗಿ ಪೂಜಾ ಕೈಂಕರ್ಯಗಳು ನಡೆದಿದ್ದವು.

ಐದು ವರ್ಷಗಳ ನಂತರ ಬ್ರಹ್ಮರಥೋತ್ಸವ ಶನಿವಾರ ಮದ್ಯಾಹ್ನ ಅದ್ದೂರಿಯಾಗಿ ನಡೆದ ರಥೋತ್ಸವವನ್ನು ಸಾವಿರಾರು ಭಕ್ತರು ಕಣ್ಮನ ತುಂಬಿಕೊಂಡರು.

ಟ್ರಾಫಿಕ್ ಜಾಮ್: ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ಬಿಳಿಗಿರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ದೊಡ್ಡಜಾತ್ರೆ ನಡೆಯುತ್ತಿರುವುದರಿಂದ  ಬೆಟ್ಟದ ರಸ್ತೆಯಲ್ಲಿ ಸುಮಾರು ೫-೭ ಕಿ.ಮೀ. ದೂರದವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.

ಯಳಂದೂರಿನ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ನೂರಾರು ಜನ ಜಮಾವಣೆಗೊಂಡಿದ್ದಾರೆ.ಇದರಿಂದಾಗಿ ಮುಂಜಾನೆಯಿಂದ ಉಪವಾಸವಿದ್ದು ದೇವರ ದರ್ಶನ ಪಡೆಯಲು ಬಂದ ಭಕ್ತರು ಸುಸ್ತಾಗಿ ರಸ್ತೆಬದಿ ಕುಳಿತ್ತಿದ್ದುದು ಕಂಡು ಬಂತು.

ಐದು ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯಾದ್ಯಂತ ಭಕ್ತರು ಆಗಮಿಸಿದ್ದಾರೆ. ಚಾಮರಾಜನಗರದ ವಿವಿಧ ಗ್ರಾಮಗಳಿಂದ ಯಳಂದೂರಿಗೆ ಆಗಮಿಸಿರುವ ಭಕ್ತರು ಬಸ್ ಸಿಗದೆ ಪರದಾಡಬೇಕಾಯಿತು.

ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿಯಿಂದ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಖಾಸಗಿ ವಾಹನಗಳಿಗೆ ಮಾರ್ಗದಲ್ಲೇ ತಡೆಯೊಡ್ಡಿ ಸರ್ಕಾರಿ ಬಸ್ ಸೌಲಭ್ಯವನ್ನ ಜಿಲ್ಲಾಡಳಿತ ಕಲ್ಪಿಸಿದೆ. ಆದರೂ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಖಾಸಗಿ ವಾಹನಗಳ ಪ್ರವೇಶಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ.