ಗಾಂಜಾ ವಶಪಡಿಸಿಕೊಂಡು ಕದ್ದು ಮಾರಲು ಕೊಟ್ಟ ಇಬ್ಬರು ಕಾನ್ಸ್ ಟೆಬಲ್ ಗಳು ಅಂದರ್

ಚೆನ್ನೈ: ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರಿಂದ ವಶಪಡಿಸಿಕೊಂಡಿದ್ದ ಗಾಂಜಾ ಕದ್ದು, ಹಣಕ್ಕಾಗಿ ಅದನ್ನು ಮಾರಾಟ ಮಾಡಲು ಮತ್ತೊಬ್ಬನಿಗೆ ನೀಡಿದ್ದ ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಕಾನ್‍ಸ್ಟೇಬಲ್‍ಗಳಿಂದಲೇ ಗಾಂಜಾ ಪಡೆದು ಮಾರಾಟದಲ್ಲಿ ತೊಡಗಿದ್ದ ದಿಲೀಪ್‍ಕುಮಾರ್(39) ಆರೋಪಿ.

ಈತ ಅಯನಾವರಂನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆಪರೇಷನ್ ಗಾಂಜಾ ಹಂಟ್ 2.0 ಹೆಸರಿನಡಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಈತನಿಂದ 1.2 ಕೆಜಿ ಗಾಂಜಾ ವಶಪಡಿಸಿಕೊಂಡಿತ್ತು.

ವಿಶೇಷ ತಂಡ ದಿಲೀಪ್‍ಕುಮಾರ್ ನನ್ನು ವಿಚಾರಣೆಗೊಳಪಡಿಸಿದಾಗ ರೈಲ್ವೇ ಪೊಲೀಸ್ ಕಾನ್ಸ್ ಟೆಬಲ್ ಶಕ್ತಿವೇಲ್ ಅವರಿಂದ ಗಾಂಜಾ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಅಧಿಕೃತವಾಗಿ ತೂಕ ಮಾಡಿ ದಾಖಲಿಸುವ ಮೊದಲು ವಶಪಡಿಸಿಕೊಂಡ ಬ್ಯಾಗ್ ನಿಂದ ಶಕ್ತಿವೇಲ್ ಗಾಂಜಾವನ್ನು ಕದ್ದಿದ್ದಾರೆ ಎಂದು ವರದಿಯಾಗಿದೆ.

ಶಕ್ತಿವೇಲ್ ಮತ್ತು ಆತನ ರೂಮ್‍ಮೇಟ್ ಸೆಲ್ವಕುಮಾರ್ ಗಾಂಜಾ ಮಾರಾಟ ಮಾಡಲು ನಿರ್ಧರಿಸಿದ್ದರು. ಹೀಗಾಗಿ ನಗರದಲ್ಲಿ ದಂಧೆ ನಡೆಸಲು ದಿಲೀಪ್‍ಕುಮಾರ್‍ನನ್ನು ಕರೆತಂದಿದ್ದರು.

ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿ ದಿಲೀಪ್‍ಕುಮಾರ್ ಹಾಗೂ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ಬಂಧಿಸಿದ್ದಾರೆ.