ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಲಿಸುವ ಬೈಕ್ ನಲ್ಲೇ ಯುವತಿಯೊಂದಿಗೆ ಲಿಪ್- ಲಾಕ್ ರೊಮ್ಯಾನ್ಸ್ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಹೆಚ್.ಡಿ ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿ ಸ್ವಾಮಿ ಬಂಧಿತ ಬೈಕ್ ಸವಾರ.
ಘಟನೆ ವಿವರ: ಏಪ್ರಿಲ್ ೨೧ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆ ಸಮಯದಲ್ಲಿ ಚಾಮರಾಜನಗರ – ಗುಂಡ್ಲುಪೇಟೆ ಮುಖ್ಯರಸ್ತೆ ಯಡಪುರ ಗ್ರಾಮದ ಬಳಿ ಬೈಕ್ ಸವಾರನೊಬ್ಬ ಒಂದು ಹುಡುಗಿಯನ್ನು ಬೈಕಿನ ಪೆಟ್ರೋಲ್ ಟ್ಯಾಂಕಿನಲ್ಲಿ ಅಪಾಯಕಾರಿ ರೀತಿಯಲ್ಲಿ ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಮತ್ತು ಅಪಾಯಕಾರಿಯಾಗಿ ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡಿತ್ತು.
ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು ಈ ಸಂಬಂಧ ಬೈಕ್ ಸವಾರನ ಮೇಲೆ ಸಂಚಾರ ನಿಯಮ ಕಾನೂನು ಉಲ್ಲಂಘನೆ ವಿರುದ್ಧ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಸ್ವಪ್ರೇರಿತ ದೂರು ದಾಖಲಿಸಿಕೊಂಡು ಬಂದಧಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಬೈಕ್ ಮತ್ತು ಬೈಕ್ ಸವಾರನ ಪತ್ತೆಗಾಗಿ ಕ್ರಮ ಕೈಗೊಂಡಿದ್ದು, ವಿಡಿಯೋನಲ್ಲಿದ್ದ ಕೆಎ-10 -ಇಎ 5121 ಪಲ್ಸರ್ ಬೈಕ್ ಬಿಎಕ್ಸ್‌ಟ್ರಾಕ್ಟ್ ಪಡೆದು ಬೈಕ್‌ನ ಆರ್ ಸಿ ಮಾಲೀಕನಿಂದ ವಿವರ ಪಡೆದು ಅದರ ಸವಾರ ಹೆಚ್.ಡಿ ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಸ್ವಾಮಿ.ಎಸ್.ಸಿ ಎಂದು ತಿಳಿದು ಆತನನ್ನು ಪತ್ತೆ ಹಚ್ಚಿ ಬೈಕ್ ಸಮೇತ ಆತನನ್ನು ವಶಕ್ಕೆ ಪಡೆದು ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಚಾಮರಾಜನಗರ ಪಟ್ಟಣ ಠಾಣೆ ಪೊಲೀಸ್ ನಿರೀಕ್ಷಕರಾದ ತಿಮ್ಮರಾಜು,ಪಿಎಸ್‌ಐ ನಂದೀಶಕುಮಾರ್ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳಾದ ಸಿ. ಚಿಕ್ಕಣ್ಣ, ಬಿ.ಕೆ. ಜಯರಾಮು, ಜಿ.ಬಿ.ಮಹದೇವಸ್ವಾಮಿ, ಟಿಕೆ.ಜಗದೀಶ, ನವೀನ್ ಕುಮಾರ್ ಭಾಗವಹಿಸಿದ್ದರು.
ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಟಿ.ಪಿ. ಶಿವಕುಮಾರ್ , ಅಪರ ಪೊಲೀಸ್ ಅಧೀಕ್ಷಕರಾದ ಕೆ.ಎಸ್ ಸುಂದರ್ ರಾಜ್ ರವರು ಪ್ರಶಂಸನೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಹೆಚ್ಚಿನ ಅಕ್ರಮಗಳನ್ನು ಪತ್ತೆ ಹಚ್ಚಿ ನಿಗ್ರಹಿಸುವಂತೆ ಸೂಚನೆ ನೀಡಿದ್ದಾರೆ.