ಸಹಕಾರ ಇಲಾಖೆಯಲ್ಲೂ ಲಂಚಾವತಾರ; ಮಾಹಿತಿ ಹೊರಗೆಡವಿದ ಹೆಚ್.ಡಿ.ಕೆ

ಬೀದರ್: ರಾಜ್ಯದಲ್ಲಿ ಪಿಎಸ್ʼಐ ನೇಮಕಾತಿ ಅಷ್ಟೇ ಅಲ್ಲ ಸಹಕಾರಿ ಕ್ಷೇತ್ರದಲ್ಲಿಯೂ ಸರಕಾರಿ ಉದ್ಯೋಗಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಇಲ್ಲೂ ಗೋಲ್ ಮಾಲ್ ನಡೆದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಹಾಕಿದ್ದಾರೆ.

ಬೀದರ್ʼನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು  ಮಾತನಾಡಿದರು.

ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ಅಲ್ಲಿ ಒಂದೊಂದು ಹುದ್ದೆಯ ನೇಮಕಕ್ಕೆ 25ರಿಂದ 50 ಲಕ್ಷ ರೂವರೆಗೆ ಲಂಚ ನಿಗದಿ ಮಾಡಲಾಗಿದೆ. ಇದು ಎಲ್ಲ ಜಿಲ್ಲೆಗಳ ಹಾಲು ಒಕ್ಕೂಟಗಳಲ್ಲೂ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಮಾಹಿತಿ ನನಗೆ ಮಾತ್ರವಲ್ಲ, ಈವರೆಗೆ ಆಡಳಿತ ನಡೆಸಿದ, ಈಗ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ಹೇಳಿದರು

ಯಾವ ಇಲಾಖೆಯಲ್ಲೂ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತಿಲ್ಲ. ಕಮೀಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹಾಗಾಗಿ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಈ ಅನ್ಯಾಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕುಮಾರಸ್ವಾಮಿ ಒತ್ತಾಯಿಸಿದರು.

ಈ ಬಗ್ಗೆ ಸಹಕಾರಿ ಸಚಿವರು ವಾಸ್ತವಾಂಶವನ್ನು ಜನರ ಮುಂದೆ ಇಡಬೇಕೆಂದು  ಅವರು ಆಗ್ರಹಿಸಿದರು.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕ ಲೋಕಸೇವಾ ಆಯೋಗವನ್ನು ಶುದ್ಧ ಮಾಡುತ್ತೇವೆ ಎಂದು ಶ್ಯಾಂಭಟ್ ಎನ್ನುವ ಅಧಿಕಾರಿಯನ್ನು ಅಲ್ಲಿಗೆ ತಂದು ಕೂರಿಸಿದರು.

ಈ ವೇಳೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಹಾಗೂ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು.