ಹಗರಣಗಳನ್ನು ಹೈಪ್ ಮಾಡಿ ನಂತರ ಕೋಲ್ಡ್ ಸ್ಟೋರೇಜ್ʼಗೆ ಹಾಕುತ್ತಿದ್ದಾರೆ -ಹೆಚ್.ಡಿ.ಕುಮಾರಸ್ವಾಮಿ

ಕೋಲಾರ/ಬಂಗಾರಪೇಟೆ: ಈಗ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದೆ. ನಾಲ್ಕು ದಿನಗಳ ಕಾಲ ಅವುಗಳನ್ನು ಮಾಧ್ಯಮಗಳಲ್ಲಿ ಹೈಪ್‌ ಮಾಡಿ ಆ ಮೇಲೆ ಗುಂಡಿ ತೋಡಿ ಮುಚ್ಚಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.

ಜನತಾ ಜಲಧಾರೆಯ ಪ್ರಯುಕ್ತ ಬಂಗಾರಪೇಟೆ ತಾಲೂಕಿನ ಯರಗೋಳ್‌ ಜಲಾಶಯದಲ್ಲಿ ಜಲ ಸಂಗ್ರಹ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡದರು.

ಈಗ ಪೊಲೀಸ್‌ ಇಲಾಖೆಯಲ್ಲಿ ನಡೆದಿರುವ ಪಿಎಸ್‌ʼಐ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಒಂದು ವಾರದ ಕಾಲ ಅವರನ್ನು ಬಂಧಿಸಿದೆವು, ಇವರನ್ನು ಬಂಧಿಸಿದೆವು ಎಂದು ಪ್ರಚಾರ ಮಾಡಿ, 15-20 ದಿನ ಆದ ಮೇಲೆ ಅದನ್ನು ಕೋಲ್ಡ್‌ ಸ್ಟೋರೇಜ್‌ʼಗೆ ಹಾಕುತ್ತಾರೆ ಎಂದು ಅವರು ಆರೋಪ ಮಾಡಿದರು.

ಇಂಥ ಅಪರಾಧಗಳನ್ನು ಯಾರದ್ದೋ ಕುಮ್ಮಕ್ಕಿನಿಂದ ವ್ಯವಸ್ಥಿತವಾಗಿ ನಡೆಸುವ ಅಪರಾಧಿಗಳನ್ನು ಬಲಿ ಹಾಕಬೇಕು. ಅದುಬಿಟ್ಟು ಅಮಾಯಕರನ್ನು ಬಲಿಪಶು ಮಾಡುವ ಕೆಲಸ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಪೊಲೀಸ್ ಇಲಾಖೆಯ ಮುಖ್ಯಸ್ಥರ ನಿರ್ಲಕ್ಷದಿಂದಲೂ ಪರೀಕ್ಷಾ ಅಕ್ರಮ ಆಗಿರಬಹುದು ಎಂದ ಮಾಜಿ ಮುಖ್ಯಮಂತ್ರಿಗಳು; ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲೂ ನೇಮಕಾತಿ ವಿಷಯದಲ್ಲಿ ಅಕ್ರಮಗಳು ನಡೆಯುಚತ್ತಲೇ ಇವೆ. ಹಣ ನೀಡಿದರೆ ಕೆಲಸ, ಇಲ್ಲವೆಂದರೆ ಇಲ್ಲ. ಕೆಲವೆಡೆ ಹಣ ಕೊಟ್ಟರೂ ಕೆಲಸ ಸಿಗದ ಅಭ್ಯರ್ಥಿಗಳು ಅಲೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ದೂರಿದರು.

ನೇಮಕ ಅಕ್ರಮಗಳ ಬಗ್ಗೆ ಸರಕಾರಗಳು ಪಾಠ ಕಲಿಯುತ್ತಿಲ್ಲ. ಇವೆಲ್ಲ ಸ್ವಲ್ಪ ದಿನ ಚರ್ಚೆ ಆಗುತ್ತವೆ. ಆಮೇಲೆ ಅವುಗಳನ್ನು ಪಕ್ಕಕ್ಕೆ ಇಡಲಾಗುತ್ತದೆ. ನಾಲ್ಕು ದಿನ ತನಿಖೆ ನಡೆಸಿದಂತೆ ನಾಟಕ ಆಡಿ ಆಮೇಲೆ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ. ವ್ಯವಸ್ಥೆ ಹಾಳು ಮಾಡುವವರನ್ನು ಸುಮ್ಮನೆ ಬಿಟ್ಟಿದ್ದಾರೆ. 15 ದಿವಸ ಇದಕ್ಕೆ ಭರ್ಜರಿ ಪ್ರಚಾರ ಕೊಟ್ಟು ಬಳಿಕ ಇಡೀ ಪ್ರಕರಣವನ್ನು ಕೋಲ್ಡ್ ಸ್ಟೋರೇಜಿಗೆ ತಳ್ಳಿಬಿಡುತ್ತಾರೆ. ವ್ಯವಸ್ಥೆಯನ್ನು ಹಾಳು ಮಾಡುವವರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಹಣ ತಿಂದು ತೇಗಿದವರು ಆರಾಮಾಗಿ ಪೊಗದಸ್ತಾಗಿ ಬೆಳೆಯಲು ಬಿಟ್ಟಿದ್ದಾರೆ. ಡ್ರಗ್ಸ್‌ ಹಗರಣ ಏನಾಗಿದೆ ಎನ್ನುವುದನ್ನು ನೋಡಿ. ದೊಡ್ಡದಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದವರು ಎಲ್ಲಿದ್ದಾರೆ? ಸುಮ್ಮನೆ ಆರೋಪ ಮಾಡುತ್ತಾರೆ, ಆಮೇಲೆ ಸೈಲಂಟ್‌ ಆಗುತ್ತಾರೆ. ಇದೇ ರೀತಿ ಎಲ್ಲ ಪ್ರಕರಣಗಳನ್ನು ಗುಂಡಿ ತೋಡಿ ಮುಚ್ಚುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.