ಚಾಮರಾಜನಗರ: ಇಡೀ ಕುಟುಂಬವೇ ಒಟ್ಟಾಗಿ ಕುಳಿತು ನೋಡುವಂತಹ ಚಲನಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಡಾ. ರಾಜ್ ಕುಮಾರ್ ಅವರು ನಾಡಿನ ಜನಮಾನಸದಲ್ಲಿ ಎಂದೆಂದಿಗೂ ಅಜರಾಮರರಾಗಿದ್ದಾರೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡದ ಮೇರುನಟ, ಪದ್ಮಭೂಷಣ, ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕøತ ಡಾ. ರಾಜ್‍ಕುಮಾರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಹೆಮ್ಮೆಯಾಗಿರುವ ಡಾ. ರಾಜ್‍ಕುಮಾರ್ ಅವರು 50 ದಶಕಗಳ ಕಾಲ ಚಲನಚಿತ್ರಗಳಲ್ಲಿ ನಟಿಸಿ ವಿಶ್ವದ ಗಮನ ಸೆಳೆದ ಏಕೈಕ ನಟರಾಗಿದ್ದಾರೆ. ಸಾಮಾನ್ಯ ಜನಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ರಾಜ್‍ಕುಮಾರ್ ತಪ್ಪುಗಳನ್ನು ತಿದ್ದುವಂತಹ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನಮನ ಸೂರೆಗೊಂಡಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುತ್ತಿದ್ದ ರಾಜ್ ಅವರು ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಬಂಗಾರದ ಮನುಷ್ಯ ಹಾಗೂ ಧ್ರುವತಾರೆ ಚಿತ್ರಗಳಲ್ಲಿ ರಾಜ್‍ಕುಮಾರ್ ರೈತರ ಪ್ರೇರಣೆಯಾಗಿದ್ದರು. ಯುವಕರು ಸಮಾಜದ ಸತ್ಪ್ರಜೆಗಳಾಗಲು ರಾಜ್ ಅದರ್ಶ ಮಾರ್ಗದರ್ಶಕರಾಗಿದ್ದಾರೆ ಎಂದು ರಾಮಚಂದ್ರ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು ಅವರು ಮಾತನಾಡಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಡಾ. ರಾಜ್‍ಕುಮಾರ್ ಸರಳ ವ್ಯಕ್ತಿತ್ವ, ನಟನೆ ಎಲ್ಲರೂ ಮಾದರಿಯಾಗಿದೆ. ರಂಗಭೂಮಿ, ಪೌರಾಣಿಕ, ಸಾಮಾಜಿಕ ಚಲನಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ರಾಜ್‍ಕುಮಾರ್ ಅಪಾರ ಜನಾನುರಾಗಿಯಾಗಿ ಕನ್ನಡಿಗರಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಋಗ್ವೇದಿ ಅವರು ಮಾತನಾಡಿ ಅಹಂಕಾರ, ಹಣ ವ್ಯಾಮೋಹವಿಲ್ಲದ ಪರಿಪೂರ್ಣ ಮಾನವ ಪ್ರೇಮವನ್ನು ಅಭಿವ್ಯಕ್ತಿಗೊಳಿಸಿದ ಡಾ. ರಾಜ್‍ಕುಮಾರ್ ಅವರಿಗೆ ಚಾಮರಾಜನಗರ ಸ್ವರ್ಗದ ಬಾಗಿಲಾಗಿತ್ತು. ಸ್ವಚ್ಚವಾದ ಪ್ರೀತಿ, ನಿಷ್ಕಲ್ಮಶ ನೋಟದಿಂದ ಎಲ್ಲರ ಗಮನ ಸೆಳೆಯುತ್ತಿದ್ದ ರಾಜ್ ಅವರು ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ಅಂತರಾಳದಿಂದ ನಟಿಸುತ್ತಿದ್ದರು. ಗುರುನಿಂದನೆ, ಮಾತಾಪಿತೃ ನಿಂದನೆಯಂತಹ ಇಂದಿನ ಪರಿಸ್ಥಿತಿಯಲ್ಲಿ ರಾಜ್‍ಕುಮಾರ್ ಪ್ರತಿಯೊಬ್ಬರಿಗೂ ಅದರ್ಶ ವ್ಯಕ್ತಿತ್ವವಾಗಿದ್ದಾರೆ. ಸರಳತೆ, ಮಾನವತೆಗೆ ಉತ್ತಮ ಉದಾಹರಣೆ ಡಾ. ರಾಜ್‍ಕುಮಾರ್ ಎಂದು ತಿಳಿಸಿದರು.
ಡಿ.ವೈ.ಎಸ್.ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ಡಾ. ರಾಜ್‍ಕುಮಾರ್ ಅವರಿಗೆ ಕನ್ನಡ ಭಾಷಾಪ್ರೇಮ ಅಪಾರವಾಗಿತ್ತು. ಸಾಮಾಜಿಕ ಮೌಲ್ಯಗಳಿಗೆ ಒತ್ತು ನೀಡುವ ಚಿತ್ರಗಳಲ್ಲಿ ನಟಿಸುತ್ತಿದ್ದ ರಾಜ್‍ಕುಮಾರ್ ಅವರು ಚಲನಚಿತ್ರಗಳಲ್ಲಿ ಮಹಿಳೆಯರಿಗೆ ಗೌರವ ತರುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದರು. ರಾಜ್‍ಕುಮಾರ್ ಮುಂದಿನ ಪೀಳಿಗೆಗೂ ಜೀವಂತವಾಗಿರುತ್ತಾರೆ ಎಂದರು.
ಕರ್ನಾಟಕ ಜಾನಪದ ಅಕಾಡಮಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ ಅವರು ಮಾತನಾಡಿ ಜಿಲ್ಲೆಯ ಹಾಗೂ ಕನ್ನಡನಾಡಿನ ಸಾಂಸ್ಕøತಿಕ ರಾಯಭಾರಿಯಾಗಿದ್ದ ಡಾ. ರಾಜ್‍ಕುಮಾರ್ ಅವರು ಭಾಷೆಯನ್ನು ಹೇಗೆ ಮಾತನಾಡಬೇಕು, ಉಚ್ಛರಿಸಬೇಕು ಎಂಬುದನ್ನು ಕನ್ನಡಿಗರಿಗೆ ಹೇಳಿಕೊಟ್ಟರು. ಸಹಜ ನಟನೆ ಮೈಗೂಡಿಸಿಕೊಂಡಿದ್ದ ರಾಜ್‍ಕುಮಾರ್ ಅವರು ಶ್ರೀಕೃಷ್ಣದೇವರಾಯ, ಮಯೂರ, ಇಮ್ಮಡಿ ಪುಲಿಕೇಶಿ ಸೇರಿದಂತೆ ಇನ್ನೂ ಅನೇಕ ಪೌರಾಣಿಕ ಪಾತ್ರಗಳಲ್ಲಿ ಪರಾಕಾಯ ಪ್ರವೇಶ ಮಾಡುತ್ತಿದ್ದರು ಎಂದು ತಿಳಿಸಿದರು.
ಕನ್ನಡಪರ ಸಂಘಟನೆಯ ಚಾ.ರಂ. ಶ್ರೀನಿವಾಸಗೌಡ ಅವರು ಮಾತನಾಡಿ ಡಾ. ರಾಜ್‍ಕುಮಾರ್ ಅವರು ಕನ್ನಡ ನಾಡು ನುಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ್‍ಕುಮಾರ್ ಅವರು ಕನ್ನಡ ಶಕ್ತಿ. ಕನ್ನಡದ ಜ್ಞಾನಕೋಶವಾಗಿದ್ದ ರಾಜ್‍ಕುಮಾರ್ ಅವರನ್ನು ನೂರು ಆಯಾಮಗಳಲ್ಲಿ ನೋಡಬಹುದಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ನಟಿಸದ ಪಾತ್ರವಿಲ್ಲ. ರಾಜ್‍ಕುಮಾರ್ ತವರು ಜಿಲ್ಲೆಯಲ್ಲಿರುವ ನಾವೇ ಧನ್ಯರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್ ಹಾಗೂ ಲೇಖಕರಾದ ಲಕ್ಷ್ಮೀನರಸಿಂಹ ಅವರುಗಳು ಡಾ. ರಾಜ್‍ಕುಮಾರ್ ಕುರಿತು ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‍ಕುಮಾರ್, ಸಾಹಿತಿ ಸೋಮಶೇಖರ ಬಿಸಿಲವಾಡಿ, ಕುಮಾರಿ ವೈಷ್ಣವಿ, ವಿವಿಧ ಸಂಘಟನೆಗಳ ಮುಖಂಡ ಗೋವಿಂದರಾಜು, ಆಲೂರು ನಾಗೇಂದ್ರ, ಜಿ. ಬಂಗಾರು, ಗು. ಪುರುಷೋತ್ತಮ್, ಕೆ.ಎಂ. ನಾಗರಾಜು, ಜಯಕುಮಾರ್, ಸಿ.ಎಂ. ಮಹದೇವಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಈಶ್ವರಿ ಸಂಸ್ಥೆಯ ಸಿ.ಎಂ. ವೆಂಕಟೇಶ್, ಜನಪದ ಗಾಯಕ ಸುರೇಶ್‍ನಾಗ್, ಸಿ.ಎಂ. ನರಸಿಂಹಮೂರ್ತಿ ಕಲೆನಟರಾಜು ಅವರುಗಳು ನಡೆಸಿಕೊಟ್ಟ ಡಾ. ರಾಜ್‍ಕುಮಾರ್ ಅವರು ಅಭಿನಯಿಸಿದ ಪ್ರಮುಖ ಚಲನಚಿತ್ರಗಳ ಗೀತೆಗಳ ಗಾಯನ ಎಲ್ಲರ ಮೆಚ್ಚುಗೆ ಗಳಿಸಿತು.