ಪ್ರೀತಂಗೌಡ ವಿರುದ್ಧ ಎಚ್.ಡಿ.ರೇವಣ್ಣ ವಾಗ್ದಾಳಿ

ಹಾಸನ: ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೋ ಬರಲಿ ಊಟ ಹಾಕುತ್ತೇವೆ. ನಮ್ಮ ಬಗ್ಗೆ ಮಾತನಾಡದಿದ್ದರೆ ನಿಮಗೆ‌ ಆಗಲ್ವಾ ಎಂದು ಶಾಸಕ ಪ್ರೀತಂಗೌಡ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಮಾನ, ಮಾರ್ಯಾದೆ ಇದ್ದರೆ ಇರೋವಷ್ಟು ದಿನ ವ್ಯಾಪಾರ ಮಾಡಿಕೊಂಡು ಮನೆಯಲ್ಲಿ ಬೀಳಲಿ,ನಾನು ಇಲ್ಲಿಯವರೆಗೂ ತಡೆದಿದ್ದೇನೆ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಸಾವಾಲು ಹಾಕಿದರು.

ದಲಿತ ಸಮಾಜದವರು ದೇವೇಗೌಡರ ಮನೆಯೊಳಗೆ ಹೋಗಿರುವ ಒಂದು ನಿದರ್ಶನ ನಮ್ಮ ಕಣ್ಮುಂದಿಲ್ಲ ಎಂಬ ಶಾಸಕ ಪ್ರೀತಂಗೌಡ ಹೇಳಿಕೆಗೆ ಹೀಗೆ ರೇವಣ್ಣ ಕಿಡಿಯಾದರು.

ಮೀಸಲಾತಿ ಇಲ್ಲದಿದ್ದಾಗ ಅಧಿಕಾರ ಕೊಟ್ಟಿರುವ ಪಕ್ಷ ಯಾವುದಾದರೂ ಇದ್ದರೆ ಅದು ದೇವೇಗೌಡರ ಪಕ್ಷ ಎಂದು ಹೇಳಿದರು.

ಹಾಸನಕ್ಕೆ ಭವಾನಿ ರೇವಣ್ಣ ಬರಲಿ ಎಂದು ಪ್ರೀತಂಗೌಡ ಹೇಳಿದ್ದಾರಲ್ಲ ಎಂಬ ಮಾಧ್ಯಮ ದವರ ಪ್ರಶ್ನೆಗೆ ಇವನನ್ನು ಕೇಳಿ ಯಾರೂ ಅಭ್ಯರ್ಥಿ ಮಾಡ್ತಾರೆ. ಮೊದಲು ಅವರದ್ದು ನೋಡಿಕೊಳ್ಳೋಕೆ ಹೇಳಿ ಎಂದು ತಿರುಗೇಟು ನೀಡಿದರು.

ಈಗೇನೊ ಆಟ ಆಡ್ತಿದ್ದಾರೆ‌ ಆಡಲಿ 2023ಕ್ಕೆ ನಾವು ತೋರಿಸುತ್ತೇವೆ. ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಬಂತು, ಇಲ್ಲ ಅಂದ್ರೆ ಈ ಗಿರಾಕಿ ಎಲ್ಲಿ ಇರೋನು ಎಂದು ಕಿಡಿಕಾರಿದರು.

ನಾನು ಅವನನ್ನು ಲೆಕ್ಕಕ್ಕೆ ಇಟ್ಟಿಲ್ಲ, ಅವರು ದೊಡ್ಡ ವ್ಯಕ್ತಿ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ನಾನು ಹೆಬ್ಬೆಟ್ಟು. ಅವರು ಲಾ ಓದಿರೋರು. ಅವರು ಯಡಿಯೂರಪ್ಪ, ಅವರ ಮಗನತ್ರ ಓದಿ ಬಂದಿರೋರು ಎಂದು ವ್ಯಂಗ್ಯ ವಾಡಿದರು.

ಭವಾನಿ ರೇವಣ್ಣ ಒಂದು ದಿನ ಎಂಎಲ್‌ಎ ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ ಎಂದು ‌ರೇವಣ್ಣ ಹೇಳಿದರು.