ಸಿದ್ದರಾಮಯ್ಯ ಅಧಿಕಾರಾವಧಿಯಲ್ಲೇ ಹೆಚ್ಚು ಹಿಂದೂ ಯುವಕರ ಹತ್ಯೆ -ಕಟೀಲ್

ಹುಬ್ಬಳ್ಳಿ: ರಾಜ್ಯದ ಗೃಹ ಸಚಿವರನ್ನು ಅಸಮರ್ಥರೆನ್ನಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ, ಅವರು ಐದು ವರ್ಷ ಅಸಮರ್ಥವಾಗಿ ಆಡಳಿತ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ‌‌‌ ನಳೀನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಹಳೆ ಹುಬ್ಬಳ್ಳಿ ಗಲಿಭೆ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಕಟೀಲ್ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಅವರಷ್ಟು ಅಸಮರ್ಥರು ನಮ್ಮ ಸಚಿವರು ಆಗಿಲ್ಲ. ಅವರು ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಗಲಭೆಯಾಗಿವೆ. ಹೆಚ್ಚು ಹಿಂದೂ ಯುವಕರ ಹತ್ಯೆಗಳಾಗಿವೆ ಎಂದು ದೂರಿದರು.

ಜೈಲಿನಲ್ಲಿಯೂ ಸಹ ಹತ್ಯೆಗಳಾಗಿದ್ದವು. ಆವಾಗ ಹತ್ಯೆಗಳನ್ನು ತಡಿಯೋಕೆ ಆಗಲಿಲ್ಲ. ಗಲಭೆಕೋರರಿಗೆ ಬಿ ರಿಪೋರ್ಟ್ ಕೊಡುವ ಕಾರ್ಯವನ್ನು ಅವರು ಮಾಡಿದರು. ಅದರಿಂದಲೇ ಈಗ ಇಂತಹ ಗಲಾಟೆಗಳಾಗುತ್ತಿವೆ ಎಂದು ಆರೋಪಿಸಿದರು.

ಹುಬ್ಬಳ್ಳಿ‌ ಗಲಭೆಯಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾದಿಯಲ್ಲಿ ಈ ಗಲಭೆ ತನಿಖೆ ನಡೆದಿದೆ, ಇದರಲ್ಲಿ ಯಾರೇ ಭಾಗಿಯಾದ್ದರೂ ಅವರ ವಿರುದ್ಧ ಕ್ರಮ ಆಗುತ್ತದೆ ಎಂದು ಕಟೀಲ್ ತಿಳಿಸಿದರು.