ಆಕ್ಸಿಜನ್ ದುರಂತ: ಕ್ರಮ ಕೈಗೊಳ್ಳಲಾಗದೆ ಪರಿಹಾರ ನೀಡಿ ಕೈ ತೊಳೆದುಕೊಂಡ ಸರಕಾರ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರದ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡ ಪರಿಣಾಮ 24ಕ್ಕೂ ಹೆಚ್ಚು ಮಂದಿ ಸೋಂಕಿತರು ಮೃತಪಟ್ಟ ಘಟನೆ ನಡೆದು ಮೇ 2ಕ್ಕೆ ವರ್ಷ.

ಆದರೆ, ರಾಜ್ಯ ಸರಕಾರ ದುರಂತಕ್ಕೆ ಕಾರಣರಾದವರ ವಿರುದ್ಧ ಯಾವುದೇ  ಕ್ರಮ ಜರುಗಿಸದೇ ಮೌನವಾಗಿ ಉಳಿದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

ಸಣ್ಣ ಪುಟ್ಟ ದುರ್ಘಟನೆಗಳು ಸಂಭವಿಸಿದ ಸಂದರ್ಭದಲ್ಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ವಹಿಸುವುದು ಸಹಜ.

ಆದರೆ, ಜಿಲ್ಲೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡು 24ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೂ ಇದುವರೆಗೆ ಒಬ್ಬರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ  ಸರ್ಕಾರದ  ವಿರುದ್ದ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಆಕ್ಸಿಜನ್ ದುರಂತವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಎರಡೇ ದಿನದಲ್ಲಿ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಮೂರ್ತಿ ವೇಣುಗೋಪಾಲ್ ನೇತೃತ್ವದ ಸಮಿತಿಯನ್ನು ರಚಿಸಿತ್ತು.

ಆ ಸಮಿತಿ ನೀಡಿರುವ ವರದಿ ಪ್ರಕಾರ ದುರಂತದಲ್ಲಿ ಸತ್ತವರು 24 ಅಲ್ಲ, 36 ಮಂದಿ.

ಅಲ್ಲದೇ ಈ ದುರಂತ ನಿರ್ಲಕ್ಷ್ಯತನದಿಂದ ನಡೆದಿದ್ದು, ಜಿಲ್ಲಾಧಿಕಾರಿಯವರು, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ಜಿಲ್ಲಾ ಸರ್ಜನ್ ಇತರರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ವರದಿ ಮಾಡಿದೆ.

ಹೀಗಿದ್ದರೂ ಯಾವುದೇ ಕ್ರಮ ಜರುಗಿಸದೇ ಸರ್ಕಾರ ಮೌನವಹಿಸಿರುವುದು ಶೋಚನೀಯ.

ಆರಂಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹೋರಾಟ ನಡೆಸಿತು. ಅಂದಿನಿಂದ ಇಂದಿನ ತನಕ ಎಸ್ ಡಿ ಪಿ ಐ  ಸಂಘಟನೆ ಹೊರತು ಪಡಿಸಿ ಮತ್ಯಾವುದೇ ಸಂಘಟನೆ ಪ್ರತಿಭಟಿಸಲಿಲ್ಲ. ಮುಗ್ಧರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂಬ ಕೂಗು ಪ್ರಬಲವಾಗಿ ಕೇಳಿ ಬರಲೇ ಇಲ್ಲ.ಇದು ನಿಜಕ್ಕೂ ವಿಪರ್ಯಾಸವೇ ಸರಿ.

ತನಿಖೆಗಳ ಸಾರ: ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಎರಡು ತಂಡಗಳಿಂದ ತನಿಖೆ ನಡೆಸಲಾಗಿತ್ತು.

ಒಂದು ಹೈಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿ ವೇಣುಗೋಪಾಲ್ ಅವರ ಸಮಿತಿ ತನಿಖೆಯ ವರದಿ ನೀಡಿದೆ.

ಇದರೊಂದಿಗೆ ರಾಜ್ಯ ಸರಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ಪಾಟೀಲ್ ಅವರ ನೇತೃತ್ವದ ತಂಡ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು. ಜತೆಗೆ ವೈದ್ಯಾಧಿ ಕಾರಿಗಳನ್ನು ವಿಚಾರಣೆಗೆ ಒಳಪಡಿಸಿತ್ತು.

ಮೃತರ ಕುಟುಂಬದವರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿತ್ತು. ಆ ತನಿಖಾ ತಂಡದ ವರದಿ ಏನಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ.

ಮೊದಲ ತಂಡದ ವರದಿಯಲ್ಲಿ ತಪ್ಪಿತಸ್ಥರು ಇದ್ದರೆ, ವರದಿಯಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂಬ ಅಂಶ ಹೊರ ಬಂದೇ ಇಲ್ಲ ಎಂಬುದು ಗಮನಾರ್ಹ.