ಅಮರಾವತಿ: ಆಂಧ್ರಪ್ರದೇಶದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ 42 ಶಿಕ್ಷಕರನ್ನು ಬಂಧಿಸಲಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ಆಂಧ್ರದಲ್ಲಿ ಎರಡು ವರ್ಷಗಳ ಕಾಲ ಪರೀಕ್ಷೆ ನಡೆದಿರಲಿಲ್ಲ. ಈ ವರ್ಷ ಏಪ್ರಿಲ್ 27ರಿಂದ 10ನೇ ತರಗತಿಯ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ 42 ಶಿಕ್ಷಕರನ್ನು ಬಂಧಿಸಲಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರೀಕ್ಷೆ ಆರಂಭವಾದ ಮೊದಲ ದಿನವೇ ಪರೀಕ್ಷಾ ಅವ್ಯವಹಾರವನ್ನು ಪತ್ತೆ ಹಚ್ಚಿದ್ದಾರೆ. ಪರೀಕ್ಷೆ ಆರಂಭವಾದ ಒಂದೂವರೆ ಗಂಟೆಯ ನಂತರ ಕರ್ನೂಲ್ ಜಿಲ್ಲೆಯಲ್ಲಿ ತೆಲುಗು ಪ್ರಶ್ನೆ ಪತ್ರಿಕೆಯ ಫೋಟೋ ವಾಟ್ಸಪ್‍ನಲ್ಲಿ ವೈರಲ್ಲಾಯಿತು.
ಅದೇ ರೀತಿ 2ನೇ ದಿನ ಹಿಂದಿ ಪರೀಕ್ಷೆ ಮತ್ತು ಮೂರನೇ ದಿನ ಇಂಗ್ಲೀಷ್ ಪತ್ರಿಕೆಗಳು ಸತ್ಯಸಾಯಿ ಜಿಲ್ಲೆ ಮತ್ತಿತರ ಜಿಲ್ಲೆಗಳಲ್ಲಿ ವೈರಲ್ಲಾಗಿವೆ.
ಎಲ್ಲಾ ಪ್ರಕರಣಗಳಲ್ಲಿ ಶಿಕ್ಷಕರ ಕೈವಾಡವಿದ್ದು, ಅವುಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಶಿಕ್ಷಕರು ಮೊದಲಿಗೆ ಹೊರಗಿನವರು ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡಿದ್ದಾರೆ ಎಂಬ ವದಂತಿಯನ್ನು ಹರಡಿದ್ದರು.
ಆದರೆ ತನಿಖೆ ನಡೆಸಿದಾಗ ಶಿಕ್ಷಕರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಸೃಷ್ಟಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಗಳನ್ನು ಹರಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಶಿಕ್ಷಣಾಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ತನಿಖೆ ನಂತರ ಸತ್ಯ ಹೊರ ಬರಲಿದೆ.