ಸನ್ಯಾಸತ್ವ ದೀಕ್ಷೆ ಸ್ವೀಕರಿಸಲಿರುವ ಬಿ.ಜೆ.ಪುಟ್ಟಸ್ವಾಮಿ

ಬೆಂಗಳೂರು: ನಾನೀಗ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತಿದ್ದು ಲೌಕಿಕ ಜೀವನದಿಂದ ಆಧ್ಯಾತ್ಮಿಕ ಜೀವನದತ್ತ ಹೆಜ್ಜೆ ಇಡುತ್ತಿದ್ದೇನೆ ಎಂದು ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.

ಮೇ 6ರಂದು ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಮಠದ ಶ್ರೀ ಜಯೇಂದ್ರ ತೀರ್ಥಪುರಿ ಮಹಾಸ್ವಾಮಿಜಿಯವರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲಿದ್ದೇನೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿ.ಜೆ.ಪುಟ್ಟಸ್ವಾಮಿ, ನಾನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30ರಂದು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ಆತ್ಮತೃಪ್ತಿಯಲ್ಲಿ ನಾನು ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ಹೇಳಿದರು.

ನಾನು ಸಮಾಜ ಸುಧಾರಣಾ ಸ್ವಾಮೀಜಿಯಾಗಿ ದೀಕ್ಷೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಪುಟ್ಟಸ್ವಾಮಿ ವಿವರಿಸಿದರು.

ಮೇ 4ರಂದು ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಕೈಲಾಸ ಮಠಕ್ಕೆ ಹೋಗುತ್ತಿದ್ದೇನೆ. ಮೇ 5ರಂದು ಹೋಮ ಇದ್ದು, 6ರಂದು ನನಗೆ ದೀಕ್ಷೆಯನ್ನ ಕೊಡುತ್ತಿದ್ದಾರೆ.

ದೀಕ್ಷೆ ಕೊಟ್ಟ ಬಳಿಕ ನಾನು ಮೇ 8ರಂದು ನಮ್ಮ ಮಠಕ್ಕೆ ತೆರಳುತ್ತೇನೆ. ಮೇ 15ರಂದು ನನಗೆ ಪಟ್ಟಾಭಿಷೇಕವನ್ನು ಕೈಲಾಸ ಮಠದ ಶ್ರೀ ಜಯತೀರ್ಥಸ್ವಾಮೀಜಿಗಳು ನೆರವೇರಿಸಿಕೊಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮೇ 15 ರಂದು ಬೆಂಗಳೂರಿನ ಮಾದನಾಯ್ಕನಹಳ್ಳಿಯಲ್ಲಿರುವ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಲಿದ್ದೇನೆ‌ ಎಂದು ತಿಳಿಸಿದರು.