ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ ನಮಾಮಿ ಭಗವತ್ಪಾದಂ ಶಂಕರಂ ಲೋಕ ಶಂಕರಂ
ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ ಶಿಖರದಂತಿರುವರು, ಕಳೆಯನ್ನು ಕಳೆದುಕೊಂಡಿದ್ದ ಭಾರತೀಯ ತತ್ತ್ವಶಾಸ್ತ್ರದ ಕ್ಷೇತ್ರಕ್ಕೆ ಹೊಸದಾದ ಜೀವಕಳೆಯನ್ನು ಒದಗಿಸಿದ ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದವರು, ಆಚಾರ್ಯತ್ರಯರಲ್ಲಿ ಮೊದಲಿಗರು ಆದಿಗುರು ಶ್ರೀಶಂಕರಾಚಾರ್ಯರು.
ಶಂ ಕರೋತಿ ಇತಿ ಶಂಕರಃ|’ ‘ಶಂ’ ಎಂದರೆ ಒಳಿತು ಮತ್ತು ‘ಕರೋತಿ’ ಎಂದರೆ ಮಾಡುವವನು. ಯಾರು ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತಾನೆಯೋ ಅವನೇ ಶಂಕರ ಎನ್ನುತ್ತಾ, ಶಂಕರರು ಹೊಸತನ್ನು ಸೃಷ್ಟಿಸದೇ ವೇದ-ಉಪನಿಷತ್ ಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿದ್ದ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.
ಆ ಆದಿ ಯೋಗಿ ಶಿವ ಹೇಗೆ ಲಯಕರ್ತನೋ ಹಾಗೆಯೇ ಈ ಆದಿ ಶಂಕರರೂ ಲಯವನ್ನಷ್ಟೇ ಮಾಡಿದರು. ಅದು ಅಜ್ಞಾನದ ಲಯ.
ಶಂಕರಾಚಾರ್ಯರ ಕಾಲಘಟ್ಟಕ್ಕಿಂತ ಮೊದಲು ಪಂಡಿತರೂ ವಿದ್ವಾಂಸರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು, ತಪ್ಪಾದ ವ್ಯಾಖ್ಯಾನಗಳನ್ನು ಪ್ರಚಾರ ಮಾಡುತ್ತಾ, ಅದ್ವೈತವನ್ನು ಮರೆತರು.
ಜ್ಞಾನ ಮಾರ್ಗಕ್ಕಿಂತ ಕರ್ಮಕಾಂಡ(ಯಜ್ಞ ಯಾಗಗಳು) ಹೆಚ್ಚಿನ ಮಹತ್ವ ಕೊಟ್ಟಿದ್ದರು. ಶ್ರುತಿ (ವೇದ)ಯ ಸಿದ್ಧಾಂತದ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾದಂತೆಲ್ಲಾ ಧರ್ಮಕ್ಕೂ ಗ್ಲಾನಿಯುಂಟಾಗಿತ್ತು. ಮೂಲ ತತ್ವವನ್ನೇ ಮರೆತ ಸಂದರ್ಭದಲ್ಲಿ ಭಾರತ ತತ್ವವನ್ನು ಪುನಃ ಸ್ಥಾಪಿಸಲು, ಶ್ರುತಿ ಸಾರವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುವ ಜ್ಞಾನಿಯ ಅಗತ್ಯತೆ ಶಂಕರರ ಕಾಲದಲ್ಲಿ ಅತ್ಯವಶ್ಯಕವಾಗಿತ್ತು.
ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವ ಕೆಲಸವನ್ನು ಶಂಕರರು ಸಮರ್ಥವಾಗಿ ಮಾಡಿದರೇ ಹೊರತು ಹೊಸ ಸಿದ್ಧಾಂತವನ್ನು ತಾವಾಗಿಯೇ ಸೃಷ್ಟಿಸಿ ಅದನ್ನು ಪ್ರಚಾರ ಮಾಡಲಿಲ್ಲ. ಹಾಗಾಗಿಯೇ ಶಂಕರರ ಸಿದ್ಧಾಂತ ಇಂದಿಗೂ, ಎಂದಿಗೂ ಅಜರಾಮರ .
788ರಲ್ಲಿ ಚೇರರ ರಾಜ್ಯ (ಇಂದಿನ ಕೇರಳ) ಕಾಲಡಿ ಗ್ರಾಮದಲ್ಲಿ ವಿಭವ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಂಚಮಿಯಂದು ಆತ್ರೇಯ ಗೋತ್ರದ, ಯಜುರ್ವೇದದ, ತೈತ್ತರೀಯ ಶಾಖೆಯವರಾದ ಶಿವಗುರು-ಆರ್ಯಾಂಬ ದಂಪತಿಗಳಿಗೆ ಶಿವನ ವರಪ್ರಸಾದದಿಂದ ಪುತ್ರರಾಗಿ ಶ್ರೀಶಂಕರರು ಜನಿಸಿದರು. ಬಾಲ್ಯದಲ್ಲಿಯೇ ಇವರಿಗೆ ಪಿತೃವಿಯೋಗವಾಯಿತು.
ಬಾಲಕ ಶಂಕರರಿಗೆ ಎಳವೆಯಿಂದಲೇ ಸಂನ್ಯಾಸ ಸ್ವೀಕರಿಸುವತ್ತ ಒಲವು. ಈ ಬಯಕೆಗೆ ತಾಯಿ ಸಮ್ಮತಿ ಇಲ್ಲ. ಒಂದು ದಿನ ಶಂಕರನು ಪೂರ್ಣಾನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಮೊಸಳೆಯೊಂದು ಅವನ ಕಾಲನ್ನು ಹಿಡಿಯಿತು. ಮಗನ ಕೂಗನ್ನು ಕೇಳಿ ಆರ್ಯಾಂಬೆ ಅಲ್ಲಿಗೆ ಓಡಿದಳು. ಅಮ್ಮ! ನಾನು ಮೊಸಳೆಯ ಬಾಯಿಗೆ ಸಿಕ್ಕಿರುವೆ; ಇನ್ನು ನನ್ನ ಜೀವನ ಮುಗಿದಂತೆ. ಈಗಲಾದರೂ ನನ್ನ ಆಸೆಯನ್ನು ಪೂರೈಸಿಕೊಳ್ಳಲು ಒಪ್ಪಿಕೋ. ನಾನು ಸನ್ಯಾಸಿಯಾಗಲು ಅನುಮತಿಯನ್ನು ನೀಡು ಎಂದು ಅಂಗಲಾಚಿದ. ತಾಯಿ ಒಪ್ಪಿದಳು. ಆದರೆ ಆ ಕೂಡಲೇ ಮೊಸಳೆ ಶಂಕರನ ಕಾಲನ್ನು ಬಿಟ್ಟು ಅಲ್ಲಿಂದ ಹೊರಟುಹೋಯಿತು.
ಮುಂದೆ ಶಂಕರ ನರ್ಮದಾ ನದೀತೀರದಲ್ಲಿದ್ದ ಗೋವಿಂದಭಗವತ್ಪಾದರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿ, ಅವರಿಂದ ಯೋಗ, ವೇದ, ಉಪನಿಷತ್ತು ಮತ್ತು ವೇದಾಂತಗಳನ್ನು ಅಭ್ಯಾಸ ಮಾಡಿದರು.
ಗುರುಗಳ ಆದೇಶದಂತೆ ಬ್ರಹ್ಮಸೂತ್ರ, ಉಪನಿಷತ್ತು ಮತ್ತು ಭಗವದ್ಗೀತೆಗೆ ಭಾಷ್ಯವನ್ನು ಬರೆದರು. ನಂತರ ಕಾಶಿಗೆ ತೆರಳಿ ಅಲ್ಲಿ ಕೆಲವು ಶಿಷ್ಯರಿಗೆ ವೇದಾಂತವನ್ನು ಬೋಧಿಸಿದರು.
ಕಾಶ್ಮೀರಕ್ಕೆ ಹೋಗಿ ಅಲ್ಲಿಯ ಮಹಾಪಂಡಿತರಾಗಿದ್ದ ಮಂಡನಮಿಶ್ರರನ್ನು ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ವಾದದಲ್ಲಿ ಸೋಲಿಸಿ ಸರ್ವಜ್ಞಪೀಠವನ್ನು ಏರಿದರು ಮತ್ತು ಮಂಡನಮಿಶ್ರರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಅವರಿಗೆ ಸುರೇಶ್ವರಾಚಾರ್ಯ ಎಂದು ಹೆಸರು ಕೊಟ್ಟರು.
ಇಡೀ ಭಾರತವನ್ನು ಎರಡು ಬಾರಿ ಕಾಲ್ನಡಿಗೆಯಲ್ಲಿ ಪರ್ಯಟನ ಮಾಡಿ ತಮ್ಮ ಅಸಾಧಾರಣ ತರ್ಕಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ. ಅದ್ವೈತದ ಧ್ವಜವನ್ನು ಎತ್ತಿ ಹಿಡಿದರು. ಅದ್ವೈತ ತತ್ವ ಸಿದ್ಧಾಂತಕ್ಕೆ ಸ್ಪಷ್ಟ ರೂಪ ಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿ ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದರು.
ಈ ಸನಾತನ ಹಿಂದೂಧರ್ಮ ಪ್ರಚಾರ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಪರ್ವತಪ್ರದೇಶವಾದ ಭಾರತದ ಉತ್ತರದ ಬದರಿಯಲ್ಲಿ ಜ್ಯೋತಿರ್ಮಠ, ಸಹ್ಯಾದ್ರಿ ಬೆಟ್ಟಗಳ ಪ್ರದೇಶವಾದ ದಕ್ಶಿಣದ ಶೃಂಗೇರಿಯಲ್ಲಿ ಶಾರದಾಪೀಠ, ಪೂರ್ವದ ಸಮುದ್ರತೀರದ ಪುರಿಕ್ಷೇತ್ರದಲ್ಲಿ ಗೋವರ್ಧನ ಪೀಠ, ಪಶ್ಚಿಮದ ಸಮುದ್ರತೀರದ ದ್ವಾರಕಾದಲ್ಲಿ ದ್ವಾರಕಾಪೀಠವನ್ನು ಪ್ರತಿಷ್ಠಾಪಿಸಿದರು. ಈ ನಾಲ್ಕೂ ಮಠಗಳು ಇಂದಿಗೂ ತಮ್ಮ ಗುರುಪರಂಪರೆಯನ್ನು ಮುಂದುವರಿಸಿಕೊಂಡು ಬಂದಿವೆ.
ಆಮ್ನಾಯ ಪೀಠಗಳ ವಿವರ
1)ಗೋವರ್ಧನ ಪೀಠ ಹಸ್ತಾಮಲಕಾಚಾರ್ಯರು ಮಹಾವಾಕ್ಯ ಪ್ರಜ್ಞಾನಂ ಬ್ರಹ್ಮ ಋಗ್ವೇದ ಐತ್ತರೇಯ ಉಪನಿಷತ್ ಭೋಗವಾಲ ಸಂಪ್ರದಾಯ
2)ಶಾರದಾಪೀಠ ಸುರೇಶ್ವರಾಚಾರ್ಯರು ಮಹಾವಾಕ್ಯಅಹಂ ಬ್ರಹ್ಮಾಸ್ಮಿ ಯಜುರ್ವೇದ ಬ್ರಹದಾರಣ್ಯಕ ಉಪ ಭೂರಿವಾಲ ಸಂಪ್ರದಾಯ
3)ದ್ವಾರಕಾ ಪೀಠ ಪದ್ಮಪಾದಾಚಾರ್ಯರು ಮಹಾವಾಕ್ಯತತ್ವಮಸೀ ಸಾಮವೇದ ಛಾಂದೋಗ್ಯ ಉಪನಿಷತ್ ಕೀಟವಾಲ ಸಂಪ್ರದಾಯ
4)ಜ್ಯೋತಿರ್ಮಠ ತೋಟಕಾಚಾರ್ಯರು ಮಹಾವಾಕ್ಯ ಅಯಮಾತ್ಮಾ ಬ್ರಹ್ಮ ಅಥರ್ವ ವೇದ ಮಾಂಡೂಕ್ಯ ಉಪ ನಂದವಾಲ ಸಂಪ್ರದಾಯ
ದಶನಾಮೀ ಪದ್ಧತಿಶಂಕರಾಚಾರ್ಯರು ಏಕದಂಡಿ ಸಂಪ್ರದಾಯವನ್ನು ಪ್ರಾರಂಭಿಸಿದರು.
ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು ಯಾವುವೆಂದರೆ ಸರಸ್ವತಿ, ತೀರ್ಥ, ಅರಣ್ಯ, ಭಾರತೀ, ಆಶ್ರಮ, ಗಿರಿ, ಪರ್ವತ, ಸಾಗರ, ವನ ಮತ್ತು ಪುರಿ.
ಸರಸ್ವತಿ, ಭಾರತಿ ಮತ್ತು ಪುರಿ ಉಪನಾಮಗಳು ಶೃಂಗೇರಿ ಮಠಕ್ಕೆ ಸೇರಿವೆ. ತೀರ್ಥ, ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ. ಗಿರಿ, ಪರ್ವತ, ಸಾಗರ ಜ್ಯೋತಿರ್ಮಠಕ್ಕೆ ಸೇರಿವೆ. ಉಳಿದವು ಸ್ವತಂತ್ರ ಸಂಪ್ರದಾಯ ಹೊಂದಿವೆ. ಅರಣ್ಯನಾಮದ ವಿದ್ಯಾರಣ್ಯರು ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದರು.
ಷಣ್ಮತ ಸ್ಥಾಪನೆ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಮತ್ತು ಸ್ಕಂದ ಈ ದೇವರುಗಳ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳವಾಡುತ್ತಿದ್ದುದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ, ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮವನ್ನು ಮಾಡಿದರು.
ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು ಉಳಿದ ದೇವತೆಗಳನ್ನು ಅದರ ಸುತ್ತಾ ಇಟ್ಟು, ಅದನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸಲು ಹೇಳಿದರು. ಈ ಪದ್ಧತಿ ಅಂದಿನಿಂದ ಶುರುವಾಯಿತು. ಈ ಕಾರಣದಿಂದ ಶಂಕರರಿಗೆ ಷಣ್ಮತ ಸ್ಥಾಪಕರೆಂದು ಹೆಸರಾಯಿತು.
ಶಂಕರಾಚಾರ್ಯರು ಎಲ್ಲಾ ದೇವ-ದೇವಿಯರ ಮೇಲೂ ಛಂದೋಬದ್ಧವಾದ, ಆರ್ಥಗರ್ಭಿತವಾದ, ಮನೋಹರವಾದ, ಭಕ್ತಿಯಿಂದ ಸ್ತುತಿಸಿದರೆ ಇಷ್ಟಾರ್ಥವನ್ನು ಕೈಗೂಡಿಸುವಂತಹ ಅಸಂಖ್ಯ ಸ್ತೋತ್ರಗಳನ್ನು ರಚಿಸಿದ್ದಾರೆ. ಏಕಶ್ಲೋಕಿಯಿಂದ ಹಿಡಿದು ದಶ ಶ್ಲೋಕಿ, ಶತಶ್ಲೋಕಿ, 580 ಶ್ಲೋಕಗಳಿರುವ ವಿವೇಕ ಚೂಡಾಮಣಿ, ಉಪದೇಶ ಸಾಹಸ್ರೀವರೆಗೂ ಇವರ ರಚನೆಗಳಿವೆ.
ಶಂಕರ ಅದ್ವೈತ ಸಿದ್ಧಾಂತತಗಳು: ಸೃಷ್ಟಿಯಲ್ಲಿ ಇರುವುದು ಒಂದೇ ವಸ್ತು; ಅದೇ ಬ್ರಹ್ಮ. ಈ ಬ್ರಹ್ಮದ ಅನುಭವವೇ ಆನಂದದ ಅನುಭವ. ಎಲ್ಲರಲ್ಲೂ ಎಲ್ಲೆಲ್ಲೂ ಬ್ರಹ್ಮವೇ ಆಗಿರುವಾಗ, ಎಲ್ಲವೂ ಬ್ರಹ್ಮವೇ ಆಗಿರುವಾಗ ಇಲ್ಲಿ ಭೇದಭಾವಕ್ಕೆ ಅವಕಾಶವೇ ಇರದು. ನಮ್ಮ ದಿಟವಾದ ಸ್ವರೂಪವಾದ ಬ್ರಹ್ಮ, ಎಂದರೆ ಆನಂದವನ್ನು ಅನುಭವಕ್ಕೆ ತಂದುಕೊಳ್ಳುವುದೇ ಮೋಕ್ಷ. ಇದಕ್ಕಾಗಿ ನಾವೇನೂ ಶ್ರಮ ಪಡಬೇಕಿಲ್ಲ; ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿಕೊಂಡರೆ ಸಾಕು. ಇದು ಶಂಕರಾಚಾರ್ಯರ ಉಪದೇಶದ ಸಾರ ಎನ್ನಬಹುದು.
ಅದ್ವೈತತ್ತ್ವ: ಶಂಕರಾಚಾರ್ಯರು ಎತ್ತಿಹಿಡಿದ ತತ್ತ್ವವನ್ನು ಅದ್ವೈತದರ್ಶನ? ಎಂದು ಕರೆಯುತ್ತಾರೆ.
ಅದ್ವೈತ ಎಂದರೇನು: ಡಿವಿಜಿಯವರು ಈ ಹೀಗೆ ಹೇಳುತ್ತಾರೆ :- ?ಅದ್ವೈತ ಅಥವಾ ಎರಡಿಲ್ಲದಿರುವಿಕೆ ಎಂಬುದು ಒಂದು ಸಂವೇದನೆಯ (feeling) ಹೆಸರು ಅಥವಾ ವಿಶ್ವದೊಡನೆ ತಾದಾತ್ಮ್ಯ ಸಂಬಂಧ.
ಅದ್ವೈತ ಎಂದರೆ ಒಂದು ಸಂವೇದನೆ ಎಂದು ನಾನು ಹೇಳಿದಾಗ ಅದು ಒಂದು ದೃಷ್ಟಿಕೋನ, ಅದು ಕೇವಲ ತರ್ಕಕ್ಕೆ ವಿಷಯವಲ್ಲ, ಎಂಬುದೇ ನನ್ನ ಉದ್ದೇಶದಲ್ಲಿರುವ ಅರ್ಥ. ಅದು ಭಾವನಾಗಮ್ಯವಾದದ್ದು. ಈ ಆತ್ಮಜ್ಞಾನವು ತರ್ಕದಿಂದ ಪಡೆಯಯಕ್ಕದ್ದಲ್ಲ (ಕಠೋಪನಿಷತ್ತು).
ಅದ್ವೈತ ಎಂಬ ಪದವೇ ಗಮನಾರ್ಹವಾದದ್ದು. ಅದು ಏಕತೆ ಎಂಬುದಕ್ಕಿಂತ ಹೆಚ್ಚಾಗಿ, ಅದ್ವೈತ ಎರಡನೆಯದಿಲ್ಲದಿರುವಿಕೆ, ಕೇವಲ ಏಕತೆಯಲ್ಲ. ಮನುಷ್ಯ ಮತ್ತು ಜಗತ್ತು, ನೋಡುವವನು ಮತ್ತು ನೋಡಲ್ಪಟ್ಟದ್ದು, ತೋರಿಕೆಯಿಂದ ತಿಳಿದುಬರುವುದು ಮತ್ತು ಕಾಣಬಾರದ ಸತ್ತ್ವ. ಈ ಪ್ರತ್ಯೇಕತೆ ಅಥವಾ ಇರ್ತನ ಮೇಲುನೋಟಕ್ಕೆ ಮಾತ್ರ ಕಾಣಬರತಕ್ಕದ್ದು. ನಮ್ಮ ಕಣ್ಣಿಗೆ ಕಾಣಬರುವುದು ಮತ್ತು ಕಾಣದೇ ಇರುವುದು, ಅವು ಎಲ್ಲವೂ ಒಂದೇ, ಎರಡಲ್ಲ. ಯಾವುದು ಇದೆಯೋ ಅದೇ ನಿಜವಾದದ್ದು. ಎಂದರೆ ಜೀವವೆಲ್ಲ ಒಂದೇ, ಎರಡಲ್ಲ, ಹಲವೂ ಅಲ್ಲ.
ಜೀವನದ ಚಟುವಟಿಕೆಗಳನ್ನು ಕುರಿತು ಅದ್ವೈತಿಯ ದೃಷ್ಟಿಯನ್ನು ಹೀಗೆ ಸಂಗ್ರಹಿಸಬಹುದು:
ಯೋಗರತವೋ ವಾ ಭೋಗರತೋವಾ ಸಂಗರತೋ ವಾ ಸಂಗವಿಹೀನಃ ?
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ ??
(ಯೋಗದಲ್ಲಿ ತೊಡಗಿರಲಿ, ಭೋಗಿಯಾಗಿರಲಿ, ಎಲ್ಲರ ಜೊತೆಯಲ್ಲಿರಲಿ, ಏಕಾಂತ ವಾಸಮಾಡಲಿ, ಯಾರ ಮನಸ್ಸು ಬ್ರಹ್ಮದಲ್ಲಿ ನೆಲೆಯಾಗಿ ನಿಂತಿರುತ್ತದೆಯೋ ಅವನ ಮನಸ್ಸು ಆನಂದಿಸುತ್ತದೆ, ಆನಂದಲ್ಲೇ ಇರುತ್ತದೆ.)
ಈ ಜಗತ್ತಿನ ವಿಷಯದಲ್ಲಿ ಬೇಸರಹೊಳ್ಳುವುದಾಗಲೀ ಅನಾದರಣೆ ತೋರುವುದಾಗಲೀ ಅದ್ವೈತವಲ್ಲ. ಸೋತ ಭಾವವೋ ಗೋಳಾಟದ ಮನೋಭಾವವೋ ಅದ್ವೈತವಲ್ಲ. ವಾಸ್ತತವವಗಿ ಅದು ಅಭಯ, ವಿಜಯ. ಏಕೆಂದರೆ ಭಗವಂತನ ಕೃಪೆಯೂ ಶಕ್ತಿಯೂ ಅನಂತ ಮತ್ತು ನೀವು ಆ ಅನಂತದೊಂದಿಗೆ ಒಂದಾಗಬಹುದು.
ಮೂಲತತ್ವ ಬ್ರಹ್ಮ ಒಂದೇ ಸತ್ಯ. ಜಗತ್ತು. ಬ್ರಹ್ಮವು ಜ್ಞಾನಸ್ವರೂಪವಾಗಿದೆ. ಅದು ಸಚ್ಚಿದಾನಂದ ಸ್ವರೂಪ, ನಿರಾಕಾರ, ನಿರ್ಗುಣ. ಭೂತ, ಭವಿಷ್ಯತ್, ವರ್ತಮಾನಗಳಲ್ಲಿ ಬಾಧಿತವಾಗದೇ ಇರುವುದು ಬ್ರಹ್ಮವೊಂದೇ.
ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಅವಿದ್ಯೆಯಿಂದ (ಅಜ್ಞಾನದಿಂದ) ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು.
ಶಂಕರಾಚಾರ್ಯ ಪ್ರತಿಪಾದಿತ ಅದ್ವೈತ ತತ್ವವು ಮಾನವರಲ್ಲಿನ ಸಾವಿನ ಭಯವನ್ನು ದೂರಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಯಾರು ಈ ಮೂಲ ತತ್ವವನ್ನು ಅರ್ಥೈಸಿಕೊಳ್ಳುತ್ತಾರೋ ಅಂತಹವರು ಎಂದಿಗೂ ಯಾವುದಕ್ಕೂ ಅಳುಕುವುದಿಲ್ಲ. ಸೃಷ್ಟಿಯ ಪ್ರತಿಯೊಂದು ಅಣು ಅಣುವಿನಲ್ಲಿಯೂ ಪರಮಾತ್ಮ ಸ್ವರೂಪಿಯಾದ ಬ್ರಹ್ಮವು ತಾನು ಇರುವುದರಿಂದಲೂ, ಆತ್ಮನೂ ಬ್ರಹ್ಮನೂ ಏಕವಾದುದರಿಂದಲೂ ನನ್ನೊಳಗೇ ಪರಬ್ರಹ್ಮದ ಅಂಶವಿರುವುದರಿಂದಲೂ ಯಾವ ಜೀವಿಯೂ ತಾನು ಮೇಲು, ಕೀಳು ಎನ್ನುವ ಹಾಗಿಲ್ಲ. ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವೂ ಅಲ್ಲ. ಜಗತ್ತೆಲ್ಲವೂ ಏಕಸ್ವರೂಪವಾಗಿದ್ದರೂ ಮಾಯೆಯಿಂದಾವೃತರಾದವರ ಕಣ್ಣುಗಳಿಗೆ ನಾನಾ ವಿಧಗಳಲ್ಲಿ ಕಾಣಿಸುತ್ತದೆ ಎನ್ನುವುದು ಅದ್ವೈತ ತತ್ವ. ಹೀಗಾಗಿ ಮಾನವರಾದಿಯಾಗಿ ಯಾರೂ ಸಾವಿಗೆ ಭಯಪಡಬೇಕಿಲ್ಲ. ಸಾವು ಅಂತ್ಯವಲ್ಲ, ಏಕೆಂದರೆ ಬ್ರಹ್ಮಕ್ಕೆ ಯಾವುದೇ ಅಂತ್ಯವಿಲ್ಲ. ಅದು ಅನಂತವಾದುದು.
ಜೀವನದ ಕೊನೆಯ ಭಾಗದಲ್ಲಿ ಶಂಕರರು ಹಿಮಾಲಯಕ್ಕೆ ಕಾಶ್ಮೀರಕ್ಕೆ ಹೋಗಿ ಅಲ್ಲಿ ಸರ್ವಜ್ಞ ಪೀಠವನ್ನು ಅಲಂಕರಿಸಿದರು.
ನಂತರ ಕೇದಾರನಾಥಕ್ಕೆ ಪ್ರಯಾಣ ಮಾಡಿ ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ಕೇದಾರ ದೇವಾಲಯದ ಹತ್ತಿರ ವಿದೇಹ ಮುಕ್ತಿಯನ್ನು ಪಡೆದರೆಂದು ಪ್ರಾಚೀನವಾದ ಮಾಧವ ಶಂಕರ ವಿಜಯದಲ್ಲಿ ಕೇದಾರದಲ್ಲಿ ಅವರು ವಿದೇಹ ಮುಕ್ತಿ ಪಡೆದರೆಂದು ಹೇಳಲಾಗಿದೆ.
“ನಾಡಿನ ಮೇಧಾವಿಗಳಲ್ಲಿ, ಮಾರ್ಗದರ್ಶಕರಲ್ಲಿ ಬುದ್ಧನನ್ನು ಬಿಟ್ಟರೆ ಶ್ರೀಶಂಕರರದ್ದೆ ಅಗ್ರಸ್ಥಾನ. ಅವರ ಬುದ್ಧಿಶಕ್ತಿ, ವಿಚಾರನೈಪುಣ್ಯ, ಸಂಪ್ರದಾಯಶ್ರದ್ಧೆ, ಸಮನ್ವಯ ಬುದ್ಧಿ, ಲೋಕಾನುಗ್ರಹ ದೃಷ್ಟಿ, ಪ್ರತಿಪಾದನಾ ಸಾಮರ್ಥ್ಯ ಇವೆಲ್ಲವೂ ಅನಾದೃಶ್ಯವಾದುವು.
ಅವರ ನಂತರ ತೋರಿಕೊಂಡ ಯಾವ ಪಂಥದ ಆಚಾರ್ಯರಾಗಲಿ ವ್ಯಾಖ್ಯಾನಕಾರರಾಗಲಿ ಅವರ ಬರಹಗಳನ್ನು ಅಲ್ಲಗಳೆಯುವಂತಿರಲಿಲ್ಲ. ಅವರನ್ನು ಅನುಸರಿಸಿದವರಿಗೂ ವಿರೋಧಿಸಿದವರಿಗೂ ಅವರು ಸಮನಾಗಿಯೇ ಉಪಜೀವ್ಯರು, ವೇದಾಂತ ಸಂಪ್ರದಾಯ ಸ್ಪಷ್ಟವಾದುದು. ಅವರ ಕಾಲದಲ್ಲಿಯೇ, ಅವರಿಂದಲೇ ಮುಂದೆ ಒಂದು ಸಾವಿರಾರು ವರ್ಷಗಳು ಕಳೆದ ಮೇಲೂ ಅವರ ಈ ನಾಡಿನ ಎಲ್ಲರ ನೆನಪಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ.
ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇಂದು ಶಂಕರ ಜಯಂತಿ. ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದರೂ ಅವರ ಸಿದ್ಧಾಂತ ಅಚ್ಚಳಿಯದೇ ಉಳಿದುಕೊಂಡಿದೆ ಎಂದರೆ, ಶಂಕರರಿಲ್ಲದಿದ್ದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು “ಹಿಂದೂ” ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಇಂದಿಗೆ ವೇದಾಂತ ತತ್ವ ಎಂದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ.
ವೇದಾಂತ ತತ್ವ ಎಂದರೇನು ಎಂಬುದೇ ಅರ್ಥವಾಗದೇ ಇದ್ದಿದ್ದರೆ ಇತ್ತೀಚಿನ ಶತಮಾನಗಳಲ್ಲಿ ನಾವು ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು. ವಿವೇಕಾನಂದರಂತಹವರನ್ನೂ ಕಾಣಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಏಕೆ ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ.
ಭಾರತದ ಸನಾತನ ಧರ್ಮ ಜೀವಂತವಾಗಿದ್ದರೆ ಅದಕ್ಕೆ ಶಂಕರರ ಕೊಡುಗೆ ಅಪಾರ. ಹಾಗಾಗಿಯೇ ಸಾವಿರ ಅಲ್ಲ ಮತ್ತೂ ಸಾವಿರ ವರ್ಷ ಕಳೆದರೂ ಜಗತ್ತಿನ ಶ್ರೇಷ್ಠ ತತ್ವ ತತ್ವಜ್ಞಾನಿ ಶಂಕರರು ಎಂದೆಂದಿಗೂ ಪ್ರಸ್ತುತ.