ಬಾಲಕಿ ಅಪಹರಿಸಿ ವಿವಾಹವಾಗಿ ಕಂಬಿ ಎಣಿಸುತ್ತಿರುವ ಯುವಕ

ಮೈಸೂರು: ಕಲ್ಯಾಣ ಮಂಟಪದಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವಿವಾಹವಾದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ.

ಬಾಲಕಿಯನ್ನು ವಿವಾಹವಾಗಿದ್ದ ಯುವಕ ಈಗ ಕಂಬಿ ಎಣಿಸುತ್ತಿದ್ದಾನೆ.

ಆತನಿಂದ ಅಪಹರಣಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.

ಮೇ 4ರಂದು ಮಂಡ್ಯ ಜಿಲ್ಲೆಯ ಕೊತ್ತೆತ್ತಿ ಹೋಬಳಿ ಬೇಲೂರು ಗ್ರಾಮದ ವ್ಯಕ್ತಿ ಕುಟುಂಬದೊಂದಿಗೆ ಮೈಸೂರಿನ ಗೋಕುಲಂನಲ್ಲಿರುವ ಶಿವಮ್ಮ ಮಹದೇವಪ್ಪ ಕಲ್ಯಾಣ ಮಂಟಪಕ್ಕೆ ಸಂಬಂಧಿಕರ ಮದುವೆಗಾಗಿ ಬಂದಿದ್ದರು.

ಅವರು ಅಂದು ಕಲ್ಯಾಣಮಂಟಪದಲ್ಲೇ ವಾಸ್ತವ್ಯ ಹೂಡಿದ್ದರು.

ಮೇ 5ರಂದು ಬೆಳಿಗ್ಗೆ 10.30ರ ಸುಮಾರಿಗೆ ಬಾಲಕಿ ಕಾಣಲಿಲ್ಲವೆಂದು ಮನೆಯವರು ಹುಡುಕುತ್ತಿದ್ದಾಗ ಅವರ ಸಂಬಂಧಿಕರು ಬೇಲೂರು ಗ್ರಾಮದ ಪ್ರತಾಪ್  ಬಾಲಕಿಯನ್ನು ಹುಂಡೈ ಕಾರಿನಲ್ಲಿ ಕರೆದುಕೊಂಡು ಹೋದನೆಂದು ತಿಳಿಸಿದ್ದಾರೆ.

ಬಾಲಕಿಯ ತಂದೆ ಮತ್ತು ಸಂಬಂಧಿಕರು ಪ್ರತಾಪ್ ಮತ್ತು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಅವರಿಬ್ಬರು ಮಂಡ್ಯ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹವಾಗಿದ್ದಾರೆಂದು ಮಾಹಿತಿ ದೊರೆತಿದೆ.

ನಂತರ ಬಾಲಕಿಯ ತಂದೆ ನೀಡಿದ ದೂರಿನನ್ವಯ ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಬಾಲ್ಯವಿವಾಹ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಅಪಹರಣಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡು ಬಾಲಕಿಯನ್ನು ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಿದ್ದಾರೆ.