ಅನಿಲ ಬೆಲೆ ಏರಿಸುತ್ತಲೇ ಇದ್ದರೆ ಜನ ಸೌದೆ ಒಲೆಗೆ ಮರಳುತ್ತಾರೆ; ಸಿದ್ದು ಟೀಕೆ

ಬೆಳಗಾವಿ: ನರೇಂದ್ರ ಮೋದಿ ಅವರು ಹೀಗೆ ಗ್ಯಾಸ್‌ ಬೆಲೆ ಏರಿಕೆ ಮಾಡಿದರೆ ಜನ ಗ್ಯಾಸ್‌ ಬಿಟ್ಟು ಸೌದೆ ಒಲೆಗೆ ಮರಳಿ ಬರುತ್ತಾರೆ ಎಂದು ‌ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಜನರ ಮೇಲೆ ಬೆಲೆ ಏರಿಕೆ ಭಾರ ಹಾಕಬೇಡಿ ಎಂದು ಮನವಿ ಮಾಡುತ್ತಲೇ ಬಂದಿದ್ದೇವೆ. ಇದು ದಪ್ಪ ಚರ್ಮದ ಸರ್ಕಾರ, ನಮ್ಮ ಮಾತಿಗೆ ಕಿವಿ ಕೊಡುತ್ತಿಲ್ಲ, ಏನು ಮಾಡೋದು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ, ಶೇ.40 ರಷ್ಟು ಕಮಿಷನ್‌, ಇಲಾಖೆಗಳ ಅಕ್ರಮಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ನಾವು ಅಧಿಕಾರದಲ್ಲಿ ಇದ್ದಾಗ ನೀಡಿದ್ದ ಅನುದಾನ ಬಿಟ್ಟರೆ ಈ ಸರ್ಕಾರದ ಅವಧಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಸಿದ್ದು ಆರೋಪಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊರೊನಾದಿಂದ ಸತ್ತವರ ಸಂಖ್ಯೆ ಬಗ್ಗೆ ಸುಳ್ಳು ಹೇಳುತ್ತಿವೆ ಎಂದು ಆರೋಪಿಸಿದರು.

ಈ ಹಿಂದೆಯೇ ನಾನು ಹೇಳಿದ್ದೆ. ಚಾಮರಾಜನಗರದಲ್ಲಿ ಆಕ್ಸಿಜನ್‌ ಸಿಗದೆ ದುರಂತ ಸಾವಿಗೀಡಾದವರ ಉದಾಹರಣೆ ನೀಡಿದ್ದೆ. ಸರ್ಕಾರ ಆಕ್ಸಿಜನ್‌ ಸಿಗದೆ ಸತ್ತವರು 3 ಜನ ಎಂದಿತ್ತು, ನಿಜವಾಗಿ ಸತ್ತವರು 39 ಜನ. ಆಗಲೇ ಸತ್ಯ ಗೊತ್ತಾಗಿತ್ತು ಎಂದು ತಿಳಿಸಿದರು.

ಬಸವನಗೌಡ ಪಾಟೀಲ್‌ ಯತ್ನಾಳ್‌  2500 ಕೋಟಿ ಕೊಟ್ಟರೆ ಮುಖ್ಯಮಂತ್ರಿ,ಮಂತ್ರಿ ಆಗಲು 100 ಕೋಟಿ ಕೊಡಬೇಕು ಎಂದು ಹೇಳಿದ್ದಾರೆ‌ ಇವರ ಬಳಿ ಹಣ ಕೇಳಿದವರು ಯಾರು, ಅವರನ್ನು ಕಳಿಸಿದ್ದು ಯಾರು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಸಿದ್ದು ಆಗ್ರಹಿಸಿದರು.

ಹಿಂದೆ ಯಡಿಯೂರಪ್ಪ ಎಷ್ಟು ದುಡ್ಡು ಕೊಟ್ಟು ಮುಖ್ಯಮಂತ್ರಿ ಆಗಿದ್ದರು ಈಗಿನ ಮುಖ್ಯಮಂತ್ರಿಗಳು ಎಷ್ಟು ಕೊಟ್ಟಿದ್ದಾರೆ ಮಂತ್ರಿಗಳು ಎಷ್ಟು ಕೊಟ್ಟಿದ್ದಾರೆ ಈ ಎಲ್ಲವೂ ತನಿಖೆಯಾಗಿ ಸತ್ಯ ಗೊತ್ತಾಗಬೇಕು ಅಲ್ಲವೇ ಎಂದು ‌ಸಿದ್ದರಾಮಯ್ಯ ಮಾಧ್ಯಮದವರನ್ನೇ ಪ್ರಶ್ನಿಸಿದರು.