ಬೆಂಗಳೂರು: ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳು, ಅನುಮೋದನೆಯಿಲ್ಲದ ಬಡಾವಣೆಗಳು, ನಕ್ಷೆ ಮಂಜೂರಾತಿಯಿಲ್ಲದೆ ತಲೆಯೆತ್ತಿರುವ ಕಟ್ಟಡಗಳಿಗೆ ದಂಡ ಶುಲ್ಕ ವಿಧಿಸಿ ಸಕ್ರಮಗೊಳಿಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ.
ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿಯಿಲ್ಲದೆ ನಿರ್ಮಾಣವಾಗಿರುವ ಲಕ್ಷಾಂತರ ಆಸ್ತಿಗಳಿವೆ.
ಈ ಆಸ್ತಿಗಳಿಗೆ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಇತರೆ ಸೌಲಭ್ಯವನ್ನು ಕಲ್ಪಿಸಿವೆ. ಆದರೂ ಅಕ್ರಮ ಕಟ್ಟಡಗಳಾಗಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಸಂಗ್ರಹವಾಗುತ್ತಿಲ್ಲ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣಗೊಂಡಿರುವ ಕಟ್ಟಡಗಳ ಪೈಕಿ ಬಹಳಷ್ಟು ಕಡೆ ಬಿ ಖಾತಾ ನೀಡಿ ತೆರಿಗೆ ವ್ಯಾಪ್ತಿಗೆ ತರುವ ಪ್ರಯತ್ನ ಹಿಂದೆ ನಡೆದಿತ್ತು.
ಹಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಬಿ ಖಾತಾ ಪಡೆಯುವುದಾಗಲಿ, ನಿರೀಕ್ಷಿತ ಆಸ್ತಿ ತೆರಿಗೆಯಾಗಲಿ ಸಂಗ್ರಹವಾಗುತ್ತಿಲ್ಲ. ಹಾಗಾಗಿ ಬಿ ಖಾತಾ ಪಡೆದ ಕಟ್ಟಡಗಳಿಗೂ ಎ ಖಾತಾ ನೀಡಿ ಸಕ್ರಮಗೊಳಿಸಲು ಸರ್ಕಾರ ಮುಂದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಇ- ಸ್ವತ್ತು ಹಾಗೂ ನಗರ ಪ್ರದೇಶದಲ್ಲಿ ಇ- ಖಾತಾ ಮೂಲಕ ಒಂದು ಬಾರಿ ಅಕ್ರಮ ಕಟ್ಟಡಗಳಿಗೆ ಸಕ್ರಮ ರೂಪ ನೀಡಲು ಸರಕಾರ ನಿರ್ಧರಿಸಿದೆ.
ಒಂದು ಬಾರಿಗೆ ನಿರ್ದಿಷ್ಟ ವಿಸ್ತೀರ್ಣಕ್ಕೆ ಇಂತಿಷ್ಟು ಅಭಿವೃದ್ಧಿ ಶುಲ್ಕ ವಿಧಿಸಿ ಕಾನೂನುಬದ್ಧಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಆರಂಭಿಸಿದೆ.