ಮೈಸೂರು: ಬೆಳ್ಳಿ ಮೇಲಿನ ಆಸೆಗೆ ಕೆಲಸ ಕೊಟ್ಟವನನ್ನೇ ಕೊಂದು ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸವಲ್ಲಿ ಮೈಸೂರಿನ ಲಷ್ಕರ್ ಠಾಣಾ ಪೊಲೀಸರು ಯಶಸ್ವಿಯಾಗಿ ದ್ದಾರೆ
ರಾಜಸ್ಥಾನ ಮೂಲದ ಅರ್ಜುನ್‍ಕುಮಾರ್ (28) ಬಂಧಿತ ಆರೋಪಿ.
ಗೋವಿಂದ(30) ಕೊಲೆಯಾಗಿದ್ದ ವ್ಯಕ್ತಿ.
ನಗರದ ಸುಮತಿನಾಥ ಜೈನಮಂದಿರಕ್ಕೆ ಸಂಬಂಧಿಸಿದ ಬೆಳ್ಳಿ ಕೆಲಸ ಮಾಡಲು ಗೋವಿಂದ ತಮ್ಮ ಸಹಾಯಕ್ಕಾಗಿ ಅರ್ಜುನ್ ಕುಮಾರ್‍ನನ್ನು ಕರೆತಂದಿದ್ದರು.
ಮಂದಿರದ ಕೆಲಸಕ್ಕಾಗಿ ಬೇರುಮಲ್ ಜೈನ್ ಎನ್ನುವವರು 14 ಕೆ.ಜಿ. ಬೆಳ್ಳಿ ಕೊಟ್ಟಿದ್ದರು.
ಹಳ್ಳದಕೇರಿ ಬಳಿ ಉಳಿದುಕೊಂಡಿದ್ದ ಇಬ್ಬರೂ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು.
ಏ. 27ರಂದು ಗೋವಿಂದನನ್ನು ಕೊಲೆ ಮಾಡಿ ಅರ್ಜುನ್ ಕುಮಾರ್ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಗಟ್ಟಿಗಳ ಸಮೇತ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲಷ್ಕರ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅರ್ಜುನ್ ಕುಮಾರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಪೊಲೀಸರು 8 ಲಕ್ಷ ರೂ. ಮೌಲ್ಯದ 12 ಕೆ.ಜಿ. ಬೆಳ್ಳಿ ವಶಕ್ಕೆ ಪಡೆದಿದ್ದಾರೆ.