ರಾತ್ರಿ ಸತ್ತ ವ್ಯಕ್ತಿಗೆ ಮರುಜೀವ ! ಪಾಳ್ಯ ಗ್ರಾಮದಲ್ಲಿ ನಡೆಯಿತು ವಿಶಿಷ್ಟ ಹಬ್ಬ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಡುವ ಸೋಜಿಗದ ಹಬ್ಬ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ನಡೆಯಿತು.

19 ವರ್ಷಗಳ ಬಳಿಕ‌ ಈ ಹಬ್ಬ ನಡೆದಿದ್ದು‌ ಸಾವಿರಾರು ಮಂದಿ ಸೇರಿದ್ದರು.

ವ್ಯಕ್ತಿ 7-8 ತಾಸು ಉಸಿರಾಟ ನಿಲ್ಲಿಸಿ ಮತ್ತೇ ಬದುಕುತ್ತಾನೆಂಬ ನಂಬಿಕೆಯನ್ನು  ಜನ ಇಟ್ಟುಕೊಂಡಿದ್ದಾರೆ‌.

ಮೇಲ್ನೋಟಕ್ಕೆ ವ್ಯಕ್ತಿ ಜೀವ ಕಳೆದುಕೊಂಡು ತಾಸುಗಟ್ಟಲೇ ಇದ್ದು ಮತ್ತೇ ಬದುಕಿಬರುತ್ತಾನೆಂಬ ನಂಬಿಕೆ ಇದೆ.

ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ ಸೀಗಮಾರಮ್ಮನ ಬಲಿ ಹಬ್ಬ ಎಂಬ ಆಚರಣೆ ನಡೆದಿದೆ.

ವ್ಯಕ್ತಿಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿ 9 ತಾಸುಗಳ ಬಳಿಕ ಮತ್ತೇ ಬದುಕಿ ಬಂದಿದ್ದಾರೆ ಎಂಬುದು ಇಲ್ಲಿನವರ ನಂಬಿಕೆ.

ಕಳೆದ 24ರಂದು ಈ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿದ್ದು ನರಬಲಿ ಆಚರಣೆ ನಡೆಯಿತು.

ಸೀಗಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಐದು ಮಂದಿಯ ತಂಡವು ಬಾವಿಗೆ ಪೂಜೆ ಸಲ್ಲಿಸಿ  ತಾಮ್ರದ ಕೊಡದಲ್ಲಿ ನೀರನ್ನು ತುಂಬಿಸಿ ಕುಣಿಯುತ್ತ ತರುವ ವೇಳೆ ದೇವಿಯ  ಮುಖವಾಡ ಮೆರವಣಿಗೆ, ಹೆಬ್ರ ಬಡಿದು ಬರುವ ತಂಡ ಮುಖಾಮುಖಿ‌ಯಾಯಿತು.

ಆ ವೇಳೆ ಬಲಿಯಾಗುವ ವ್ಯಕ್ತಿ  ಕುರಿಸಿದ್ದ ನಾಯಕ ಎಂಬವರ ಮೇಲೆ  ಅರ್ಚಕರು  ಮಂತ್ರಾಕ್ಷತೆ ಎಸೆದು ಅವರ ಎದೆ ಮೇಲೆ ಕಾಲಿಡುತ್ತಿದ್ದಂತೆ ಆತ ಪ್ರಜ್ಞೆ ಕಳೆದುಕೊಂಡು ಬಿದ್ದರು.

ಇದನ್ನೇ ಬಲಿ ಎಂದು ಕರೆಯಲಾಗುತ್ತದೆ. ಆ ವ್ಯಕ್ತಿ ಸತ್ತಿರುತ್ತಾನೆ ಎಂಬುದು ಜನರ ನಂಬಿಕೆ.

ಆತನನ್ನು ಬಲಿ ಮನೆ ಎಂಬಲ್ಲಿ ಬರೋಬ್ಬರಿ 8 ತಾಸು ಇಟ್ಟು ಆತನಿಗೆ ಅರಿಸಿನ ಲೇಪಿಸಲಾಗಿತ್ತು.

ಆತನಿಗೆ ಕೈ-ಕಾಲು ಚಲನೆ ಇರಲಿಲ್ಲ, ಉಸಿರಾಟವೂ ಇರಲಿಲ್ಲ ಎಂದು ಜನ ಹೇಳುತ್ತಾರೆ.

ಮಂಗಳವಾರ 5 ರ ಸುಮಾರಿಗೆ ಶವದ ಮೆರವಣಿಗೆ ನಡೆಸಲಾಯಿತು.

ಈ ವೇಳೆ ನಾಲ್ವರು ಆತನನ್ನು ಮೇಲಕ್ಕೆ ತೂರಿಕೊಂಡು ಬರುತ್ತಾ ಮೆರವಣಿಗೆ ನಡೆಸಿ ದೇವಾಲಯದತ್ತ ಮೃತದೇಹ ತಂದಿಟ್ಟರು.

ಆಗ ಅರ್ಚಕರು ತೀರ್ಥ ಪ್ರೋಕ್ಷಿಸಿದ ಕೂಡಲೆ ಕುರಿ ಸಿದ್ದ ನಾಯಕ ಎಚ್ಚರಗೊಂಡು ಮರು ಜೀವ ಬರುತ್ತದೆ.

ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಈ ನರಬಲಿ ಆಚರಣೆ ಕೆಲ ಕಾರಣಗಳಿಂದ ನಿಂತು ಹೋಗಿತ್ತು.

19 ವರ್ಷದ ಬಳಿಕ ಮತ್ತೆ ಹಬ್ಬ ನಡೆದಿದೆ. ಹಬ್ಬದ ಪ್ರಯುಕ್ತ ನಿರಂತರ ಒಂದು ತಿಂಗಳಕಾಲ ಯಾರೊಬ್ಬರು ಮಾಂಸಹಾರ ಸೇವಿಸುವುದಿಲ್ಲ.

ಸೀಗೆಮಾರಮ್ಮನ ಒಕ್ಕಲಿನವರು ಹೋಟೆಲ್ ಗಳಲ್ಲಿ ತಿನ್ನುವುದಿಲ್ಲ,ಒಗ್ಗರಣೆ ಹಾಕಿದ ಆಹಾರ ಸೇವಿಸದೇ ಕಟ್ಟುಪಾಡುಗಳನ್ನು ಆಚರಣೆ ಮಾಡಿದ್ದಾರೆ.

8 ತಾಸು ಮೃತಪಟ್ಟಿದ್ದ ವ್ಯಕ್ತಿ ಮತ್ತೆ ಜೀವ ಪಡೆಯುವುದು ಈ ಹಬ್ಬದ ವಿಚಿತ್ರ ಹಾಗೂ ನಂಬಿಕೆಗೆ ನಿಲುಕದ ವಿಶಿಷ್ಟ ಆಚರಣೆಯಾಗಿದೆ.