ಮರು ನಿರ್ಮಾಣಗೊಂಡ ಚಾಮರಾಜೇಶ್ವರ ರಥ ಶುಕ್ರವಾರ ಚಾ.ನಗರಕ್ಕೆ ಆಗಮನ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥವನ್ನು ಹೊಸದಾಗಿ ನಿರ್ಮಿಸಲಾಗಿದ್ದು ನಗರಕ್ಕೆ ತರಲು ಸಿದ್ದತೆ ನಡೆದಿದೆ.

ಚಾ.ನಗರ ವಿಧಾನಸಭಾ ಕ್ಷೇತ್ರದ  ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು  ಬೆಂಗಳೂರಲ್ಲಿ ಗುರುವಾರ ಶ್ರೀ ಚಾಮರಾಜೇಶ್ವರ ನೂತನ  ರಥಕ್ಕೆ  ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು.

ಚಾಮರಾಜನಗರದ ಶ್ರೀ ಚಾಮರಾಜೇಶ್ವರಥಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದರ ಪರಿಣಾಮ ೪ ವರ್ಷಗಳ ಕಾಲ ರಥೋತ್ಸವ ನಿಂತು ಹೋಗಿತ್ತು.

ನಂತರ ಶಾಸಕರು ಹೊಸದಾಗಿ ರಥ ನಿರ್ಮಾಣ ಮಾಡಲು ಪ್ರಕ್ರಿಯೆ ಕೈಗೊಂಡಿದ್ದರು.

ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಅನುದಾನ ಬಿಡುಗಡೆ ಮಾಡಿ ಹೊಸ ರಥವನ್ನು ನಿರ್ಮಿಸಲಾಗಿದೆ.

ಈಗ ನೂತನ ರಥ ಬೆಂಗಳೂರಿನ ಶಿಲ್ಪಿ ಗಳಿಂದ ನಿರ್ಮಾಣಗೊಂಡಿದ್ದು ರಥವನ್ನು  ಚಾಮರಾಜನಗರಕ್ಕೆ ತರಲು ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಗಳನ್ನು  ಶಾಸಕರಾದ ಸಿ ಪುಟ್ಟರಂಗಶೆಟ್ಟಿ ನೆರವೇರಿಸಿದರು.

ಮೇ 13ರಂದು ಬೆಳಿಗ್ಗೆ ಆದಿಶಕ್ತಿ ಚಾ.ನಗರದ ದೇವಾಲಯದ ಬಳಿಯಿಂದ ನೂತನ ಚಾಮರಾಜೇಶ್ವರ ರಥವನ್ನು ಬರಮಾಡಿಕೊಳ್ಳಲಾಗುತ್ತದೆ.

ಪೂಜೆ ಸಲ್ಲಿಸಿದ ಬಳಿಕ ರಥವನ್ನು  ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯ ಮೂಲಕ ಚಾಮರಾಜೇಶ್ವರ ದೇವಾಲಯಕ್ಕೆ ತರಲಾಗುತ್ತದೆ.

ನಗರಕ್ಕೆ ನೂತನ ರಥ ಬರುವ ಸಂದರ್ಭದಲ್ಲಿ ಎಲ್ಲಾ ಸಮುದಾಯ ಹಾಗೂ ಕೋಮಿನ ಯಜಮಾನರು, ಸಂಘಟನೆಗಳ ಮುಖಂಡರು, ಭಕ್ತರು, ಎಲ್ಲಾ ಜನರು ಪಾಲ್ಗೊಳ್ಳುವಂತೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಮನವಿ ಮಾಡಿದ್ದಾರೆ.