ಬೆಂಗಳೂರು: ಯುವತಿಗೆ ಆಸಿಡ್ ಹಾಕಿ ಪರಾರಿಯಾಗಿದ್ದ ಕಿರಾತಕ ನಗೇಶನನ್ನು ಹೆಡೆಮುರಿ ಕಟ್ಟಿ ಕರೆ ತರುವಲ್ಲಿ ಪೊಲೀಸರು ಕಡೆಗೂ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನಿಂದ ನಗರಕ್ಕೆ ಕರೆತರುತ್ತಿದ್ದಾಗ ದಾರಿಮಧ್ಯೆ ಬಹಿರ್ದೆಸೆಗೆ ಹೋಗುವ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ನಾಗೇಶನ ಕಾಲಿಗೆ ಗುಂಡು ಹಾರಿಸಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದಾರೆ.
ಆರೋಪಿ ನಾಗೇಶನ ಬಲಗಾಲಿಗೆ ಗುಂಡು ತಗುಲಿದ್ದು, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 18 ದಿನಗಳ ಹಿಂದೆ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ ತಮಿಳುನಾಡಿನ ತಿರುವಣಮಲೈನ ರಮಣ ಆಶ್ರಮದಲ್ಲಿದ್ದ.
ಈ ಬಗ್ಗೆ ಮಾಹಿತಿ ಕಲೆ ಹಾಕಿದ ಕಾಮಾಕ್ಷಿಪಾಳ್ಯ ಠಾಣೆ ಇನ್‍ಸ್ಪೆಕ್ಟರ್ ಪ್ರಶಾಂತ್ ಹಾಗೂ ತಂಡ ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ತೆಗೆದುಕೊಂಡು ಜೀಪ್‍ನಲ್ಲಿ ನಗರಕ್ಕೆ ಕರೆತರುತ್ತಿದ್ದರು.
ಶನಿವಾರ ಬೆಳಗಿನ ಜಾವ 1.30ರ ಸುಮಾರಿನಲ್ಲಿ ನೈಸ್‍ರಸ್ತೆಯಲ್ಲಿ ಬರುತ್ತಿದ್ದಾಗ ನಾಗೇಶ ತಾನು ಬರ್ಹಿದೆಸೆಗೆ ಹೋಗಬೇಕೆಂದು ಒತ್ತಾಯಿಸಿದ್ದಾನೆ.
ಆಗ ಪೊಲೀಸರು ಜೀಪು ನಿಲ್ಲಿಸಿಲ್ಲ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಮತ್ತೆ ಜೀಪು ನಿಲ್ಲಿಸುವಂತೆ ಕೇಳಿದ್ದಾನೆ.
ಆಗ ಪೊಲೀಸರು ಜೀಪು ನಿಲ್ಲಿಸಿದ್ದಾರೆ. ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಇಳಿದು ತಪ್ಪಿಸಿಕೊಳ್ಳಲು ನಾಗ ಓಡಿದ್ದಾನೆ.
ತಕ್ಷಣ ಹೆಡ್ ಕಾನ್‍ಸ್ಟೆಬಲ್ ಮಹದೇವಯ್ಯ ಅವರು ಹಿಡಿದುಕೊಳ್ಳಲು ಮುಂದಾಗುತ್ತಿದ್ದಂತೆ ಅವರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ.
ಅಲ್ಲದೆ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಇನ್‍ಸ್ಪೆಕ್ಟರ್ ಪ್ರಶಾಂತ್ ನಿಲ್ಲುವಂತೆ ಎಚ್ಚರಿಕೆ ನೀಡಿದರೂ ಸಹ ಪೊಲೀಸ್ ಜೀಪ್‍ನ ಮೇಲೆ ನಾಗ ಕಲ್ಲು ಎಸೆದಿದ್ದಾನೆ.
ಆ ಸಂದರ್ಭದಲ್ಲಿ ಇನ್‍ಸ್ಪೆಕ್ಟರ್ ತಮ್ಮ ಸರ್ವೀಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಆದರೂ ಕಿವಿಗೊಡದೆ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ನಾಗೇಶನ ಬಲಗಾಲಿಗೆ ತಗುಲಿ ಕುಸಿದುಬಿದ್ದದ್ದಾನೆ.
ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ದೈವಭಕ್ತನಂತೆ ನಾಗೇಶ ಭಕ್ತನ ವೇಷತೊಟ್ಟು ತಮಿಳುನಾಡಿನ ತಿರುವಣ್ಣಾಮಲೈನ ರಮಣ ಆಶ್ರಮ ಸೇರಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.