ಅಧಿಕಾರಿಗಳ ಚಳಿಬಿಡಿಸಿದ ಜಿಲ್ಲಾಧಿಕಾರಿ, ಕೆಲವರಿಗೆ ವರ್ಗಾವಣೆ ಶಿಕ್ಷೆ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕು ಕಛೇರಿಗೆ ಜಿಲ್ಲಾಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಇಬ್ಬರು ಅದಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡಿದರೆ ತಹಶೀಲ್ದಾರ್ ಗೆ ಕಡ್ಡಾಯ ರಜೆ ನೀಡಲಾಗಿದೆ.

ಹನೂರು ತಾಲ್ಲೂಕು ಕಛೇರಿಯ ಗ್ರೇಡ್-2 ತಹಸೀಲ್ದಾರ್‌  ರಾಜಾಕಾಂತ್.ಕೆ ನಿಯಮಗಳನ್ನು ಉಲ್ಲಂಘಿಸಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿಗಳನ್ನು ಮಂಜೂರು ಮಾಡಿದ್ದಾರೆ

ಸಾರ್ವಜನಿಕರ ಅಹವಾಲುಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಹಾಗೂ ತಕರಾರು ಪಕರಣಗಳನ್ನು ಸರಿಯಾಗಿ ಇತ್ಯರ್ಥಪಡಿಸುತ್ತಿಲ್ಲ ಎಂಬ ಬಗ್ಗೆ ಹಲವರು ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಜಾಕಾಂತ್.ಕೆ ಅವರನ್ನು  ತಕ್ಷಣದಿಂದ ಜಾರಿಗೆ ಬರುವಂತೆ  ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಖಾಲಿ ಇರುವ ಮುನ್ಸಿಪಲ್ ತಹಸೀಲ್ದಾರ್ ಹುದ್ದೆಗೆ ನಿಯೋಜಿಸಿ ಆದೇಶಿಸಲಾಗಿದೆ.

ದಿನೇಶ್ ಎಂಬುವವರು ಸಾರ್ವಜನಿಕರಿಂದ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ  ತನಿಖಾ ತಂಡವನ್ನು ರಚಿಸಿ ವರದಿ
ಸಲ್ಲಿಸುವಂತೆ ಆದೇಶಿಸಲಾಗಿತ್ತು. 

ಹನೂರು ತಾಲೂಕು ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ  ತಹಸೀಲ್ದಾರ್‌ ನಾಗರಾಜು ಸಾಗುವಳಿ ಚೀಟಿ ವಿತರಣೆ,ಸರ್ಕಾರದ ನಿಯಮಗಳನ್ನು ಪಾಲಿಸದೆ ಖಾತೆಗಳನ್ನು ಅಕ್ರಮವಾಗಿ ಮಂಜೂರು ಮಾಡುತ್ತಾರೆ ಹಾಗೂ ಆರ್‌ಆರ್‌ಟಿ ಪ್ರಕರಣಗಳನ್ನು ಮನಸೋ ಇಚ್ಛೆ ನಿರ್ವಹಿಸುತ್ತಾರೆಂದು ಸಾರ್ವಜನಿಕರಿಂದ ದೂರು ಬಂದಿದ್ದವು.

ಈ ಎಲ್ಲಾ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಶಹಶೀಲ್ದಾರ್ ನಾಗರಾಜು ಅವರನ್ನು ಮೇ 13 ರಿಂದ 28-06-2022 ರವರೆಗೆ ಅನ್ವಯವಾಗುವಂತೆ  ಕಡ್ಡಾಯ ರಜೆ ಮಂಜೂರು ಮಾಡಿ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾದಿಕಾರಿ ಆದೇಶಿಸಿದ್ದಾರೆ.

ಆರ್‌ಆರ್‌ಟಿ ಕಡತಗಳು, ಪೌತಿಖಾತೆಗೆ ಸಂಬಂಧಿಸಿದ ಕಡತಗಳು, ಎಲ್‌ಎನ್‌ಡಿ ಕಡತಗಳು ಮತ್ತು 94 ಸಿ ಗೆ ಸಂಬಂಧಿಸಿದ ಕಡತಗಳನ್ನು ಇತ್ಯರ್ಥಪಡಿಸುವಲ್ಲಿ ವಿಳಂಬ ದೋರಣೆ ಅನುಸರಿಸುತ್ತಿದ್ದುದು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗಧಿತ ಸಮಯದಲ್ಲಿ ನಿರ್ವಹಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಶಿರಸ್ತೆದಾರ್ ರವಿ  ವಿರುದ್ಧ ದೂರು ಬಂದಿದ್ದವು