ಯುವಕನ ಕೈಗೆ ಮಗು ಕೊಟ್ಟು ನಾಪತ್ತೆ ಪ್ರಕರಣಕ್ಕೆ ದೊಡ್ಡ ತಿರುವು

ಮೈಸೂರು: ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

ಪ್ರೀತಿಗೆ ಅಡ್ಡಿಯಾದ ಮಗುವನ್ನು ಅನಾಥ ಎಂದು ಬಿಂಬಿಸಲು ಯತ್ನಿಸಿದ ಕಳ್ಳ ಪ್ರೇಮಿಗಳನ್ನು ಮೈಸೂರಿನ ಲಷ್ಕರ್ ಠಾಣಾ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗುವನ್ನು ಪುನರ್ವಸತಿ ಕೇಂದ್ರದ ಆಶ್ರಯಕ್ಕೆ ಪೊಲೀಸರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಲಷ್ಕರ್ ಪೆÇಲೀಸ್ ಠಾಣೆಗೆ ಹೆಚ್.ಡಿ.ಕೋಟೆಯ ಯುವಕ ರಘು ಗಂಡು ಮಗು ಸಮೇತ ಹಾಜರಾಗಿ ಕಥೆ ಕಟ್ಟಿದ್ದ. ಅಪರಿಚಿತ ಮಹಿಳೆ ಬಸ್ ಸ್ಟ್ಯಾಂಡ್ ನಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾಗಿದ್ದಾರೆ. ಮೈಸೂರಿಗೆ ಮಗು ತಂದಿರುವುದಾಗಿ ಕಥೆ ಕಟ್ಟಿ ಪೆÇಲೀಸರನ್ನು ನಂಬಿಸಿದ್ದ.

ಆತ ಹೇಳಿದ ಕಥೆ ನಂಬಿದ ಪೊಲೀಸರು ಮಗುವನ್ನು ಆರೈಕೆಗಾಗಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದರು.

ಆನಂತರ ಪೊಲೀಸರು ನಡೆಸಿದ ತನಿಖೆ ವೇಳೆ ಸತ್ಯಾಂಶ ಬಯಲಾಗಿದೆ.

ತನ್ನ ಪ್ರಿಯಕರಳಿಗೆ ಹುಟ್ಟಿದ ಮಗುವನ್ನ ಅನಾಥ ಮಗುವೆಂದು ಬಿಂಬಿಸಿರುವುದು ತನಿಖೆ ವೇಳೆ ಗೊತ್ತಾಗಿದೆ.

ತಮ್ಮ ಪ್ರೀತಿಗೆ ಅಡ್ಡಿಯಾದ ಮಗುವನ್ನ ದೂರ ಮಾಡಲು ಈ ಪ್ರೇಮಿಗಳು ಆಡಿದ ನಾಟಕ ಎಂದು ರುಜುವಾತಾಗಿದೆ.

ರಾಯಚೂರಿನ ವಿವಾಹಿತ ಮಹಿಳೆಯನ್ನ ರಘು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ಒಡನಾಟ ಹೆಚ್ಚಾಗಿತ್ತು. ವಿವಾಹಿತ ಮಹಿಳೆಗೆ ಗಂಡು ಮಗು ಇತ್ತು. ಇವರ ಅನೈತಿಕ ಸಂಬಂಧ ಮಹಿಳೆಯ ಪತಿ ಯೇಸುರಾಜ್ ಗೆ ಗೊತ್ತಾಗಿತ್ತು. ಈ ಹಿನ್ನಲೆ ಮಹಿಳೆ ಪತಿಯಿಂದ ಬೇರ್ಪಡಲು ಸಿದ್ದವಾಗಿದ್ದಳು.

ತಮ್ಮಿಬ್ಬರ ಪ್ರೀತಿಗೆ ಮಗು ಅಡ್ಡವಾಗಿತ್ತು. ಮಗುವನ್ನು ದೂರ ಮಾಡಲು ಪ್ಲಾನ್ ಮಾಡಿದ ಈ ಖತರ್ನಾಕ್ ಆಸಾಮಿಗಳು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಮಗು ಕೊಟ್ಟು ನಾಪತ್ತೆಯಾಗಿದ್ದಳು ಎಂಬ ಕಥೆ ಕಟ್ಟಿದ್ದರು.

ಯೇಸುರಾಜ್ ರನ್ನು ಲಷ್ಕರ್ ಠಾಣಾ ಪೆÇಲೀಸರು ಸಂಪರ್ಕಿಸಿದಾಗ ನಿಜಾಂಶ ಬಯಲಾಗಿದೆ.

ಪ್ರಿಯಕರನ ಜೊತೆ ಸೇರಲು ಹವಣಿಸಿ ಡ್ರಾಮಾ ಮಾಡಿದ್ದ ಮಹಿಳೆ ಇದೀಗ ಮಹಿಳಾ ಸಾಂತ್ವನ ಕೇಂದ್ರದ ಅತಿಥಿಯಾಗಿದ್ದಾಳೆ.

ಮಗು ಬಾಪೂಜಿ ಚಿಲ್ಡ್ರನ್ ಕೇಂದ್ರದ ವಶದಲ್ಲಿದೆ.

ಈ ಪ್ರೇಮಿಗಳ ಮೇಲೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.