ಚಾಮರಾಜನಗರ: ಜಿಲ್ಲೆಯಲ್ಲಿ ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ಹೆಚ್ಚುವರಿ ಬೆಲೆಗೆ ಮಾರಾಟ ಮಾಡುವವರು ಹಾಗೂ ಕೃತಕ ಅಭಾವ ಸೃಷ್ಠಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಸಿದ್ದತೆಗಳ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಜಿಲ್ಲಾ ಮಾರಾಟಗಾರರು ಹಾಗೂ ಸರಬರಾಜು ಸಂಸ್ಥೆ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಪರಿಕರಗಳನ್ನು ರೈತರಿಗೆ ಅಗತ್ಯ ಪ್ರಮಾಣದಲ್ಲಿ ಸರಬರಾಜು ಮಾಡಬೇಕು. ಯಾವುದೇ ಭಾಗದಲ್ಲಿ ಕೃಷಿಗೆ ಪೂರಕವಾಗಿರುವ ಪರಿಕರಗಳಿಗೆ ಕೊರತೆ ಕಾಡಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಗಮನಹರಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಪಾಯಿಂಟ್ ಆಫ್ ಸೇಲ್ (ಪಿ.ಒ.ಎಸ್) ವ್ಯವಸ್ಥೆಯ ಮುಖಾಂತರವೇ ರಸಗೊಬ್ಬರ ವಿತರಣೆಯಾಗಬೇಕು. ಇದರಿಂದ ಭೌತಿಕ ದಾಸ್ತಾನು ಹಾಗೂ ಮಾರಾಟ ಇನ್ನಿತರ ಮಾಹಿತಿಗಳು ಪಾರದರ್ಶಕವಾಗಿ ಇರಲಿವೆ. ಈ ಹಿನ್ನೆಲೆಯಲ್ಲಿ ಇಂತಹ ವ್ಯವಸ್ಥೆಗೆ ಒತ್ತು ನೀಡಬೇಕು ಎಂದರು.
ಗುಣಮಟ್ಟದ ರಸಗೊಬ್ಬರ ಇನ್ನಿತರ ಪರಿಕರಗಳನ್ನು ಮಾರಾಟ ಮಾಡಬೇಕು. ಅನಧಿಕೃತ ಮಾರಾಟಕ್ಕೆ ಅವಕಾಶ ನೀಡಬಾರದು. ಹೆಚ್ಚುವರಿ ದರ ಪಡೆಯುವುದು, ಅಭಾವ ಸೃಷ್ಠಿಸುವುದು, ಸೇರಿದಂತೆ ಯಾವುದೇ ಉಲ್ಲಂಘನೆಗಳು ಕಂಡು ಬಂದರೆ ಅಂಗಡಿಗಳ ಪರವಾನಗಿ ಅಮಾನತುಪಡಿಸಬೇಕು. ಗಂಭೀರ ಪ್ರಕರಣಗಳಿದ್ದಲ್ಲಿ ಪರವಾನಗಿ ರದ್ದು ಮಾಡಬೇಕು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ, ಇತರೆ ಪರಿಕರಗಳ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಇನ್ನೂ 15 ದಿನಗಳೊಳಗೆ ಜಿಲ್ಲೆಯ ಎಲ್ಲಾ ಅಂಗಡಿಗಳ ಪರಿಶೀಲನಾ ವರದಿಯನ್ನು ನೀಡಬೇಕು. ತಾಲೂಕು ಹಂತದಲ್ಲಿಯೂ ರಸಗೊಬ್ಬರ ಪರಿಕರಗಳ ಮಾರಾಟಗಾರರು ಹಾಗು ಸರಬರಾಜು ಸಂಸ್ತೆಯ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸುಗಮ ವ್ಯವಸ್ಥೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ರಸಗೊಬ್ಬರ ಮಾರಾಟಗಾರರು ಹಾಗೂ ಸರಬರಾಜು ಸಂಸ್ಥೆಯ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಯವರು ಸಮಾಲೋಚಿಸಿದರು.
ಜಂಟಿ ಕೃಷಿ ನಿರ್ದೇಶಕರಾದ ಹೆಚ್.ಟಿ. ಚಂದ್ರಕಲಾ, ಉಪನಿರ್ದೇಶಕರಾದ ಸೋಮಶೇಖರ್, ತಾಲೂಕು ಕೃಷಿ ಸಹಾಯಕ ನಿರ್ದೇಶಕರು, ಜಿಲ್ಲಾ ರಸಗೊಬ್ಬರ ಮಾರಾಟಗಾರರು ಹಾಗೂ ಸರಬರಾಜು ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.