ಬೆಂಗಳೂರು: ನಮ್ಮ ಪಕ್ಷದ ಬಗ್ಗೆ ಆರೇಳು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಡೋಂಗಿ ಜ್ಯಾತ್ಯತೀತ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು
ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಬಿಂಬಿಸಲು ಪ್ರಯತ್ನ ಮಾಡಿದ್ದಾರೆ, ಅದನ್ನು ಇನ್ನೂ ಮುಂದುವರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗರಂ ಆದರು.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಟಿ.ಎ.ಶರವಣ ನಾಮಪತ್ರ ಸಲ್ಲಿಸಿದ ನಂತರ ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಂಗಳವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈಚೆಗೆ ತುಮಕೂರಿನಲ್ಲೂ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅವರೇ ಜಾತಿವಾರು ಸಮಾವೇಶ ಮಾಡಿಕೊಂಡು ನಾವು ಜಾತ್ಯತೀತರು ಎಂದು ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ನಾನು ಯಾವ ಪಕ್ಷದ ಬಿ ಟೀಂ ಅಲ್ಲ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಬಿಜೆಪಿ ಸಾಮರಸ್ಯ ಹಾಳು ಮಾಡಲು ಸಂಘಟನೆಗಳಿಗೆ ಪೆÇ್ರೀತ್ಸಾಹ ನೀಡುತ್ತಿದೆ. ಆ ಸಂಘಟನೆಗಳನ್ನು ಎದುರು ಹಾಕಿಕೊಂಡು ಹೋರಾಟ ನಡೆಸುತ್ತಿರುವವರು ನಾವು. ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಂದಾಗ ಕಾಂಗ್ರೆಸ್ ನವರು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡರು. ಆದರೂ ಪದೆಪದೇ ನಮ್ಮ ಪಕ್ಷದ ಬಗ್ಗೆ ಇವರು ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಕುಮಾರಸ್ವಾಮಿ.
ನಾಲ್ಕನೇ ಅಭ್ಯರ್ಥಿಗೆ ಮೂರು ಪಕ್ಷಗಳಿಗೂ ನಂಬರ್ ಇಲ್ಲ. ಮೂರು ಪಕ್ಷಕ್ಕೆ ಹೋಲಿಕೆ ಮಾಡಿದರೆ ನಮ್ಮ ಮತಗಳು ಹೆಚ್ಚಿವೆ. ನಾವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಆ ಪಕ್ಷಗಳು ಕೂಡ ಒಂದಿಷ್ಟು ಲೆಕ್ಕಾಚಾರ ಮಾಡುತ್ತಿದ್ದು, ನಾವು ಇಲ್ಲಿಯವರೆಗೆ ಯಾವುದೇ ಚರ್ಚೆಯನ್ನು ಯಾರ ಜೊತೆಯೂ ಮಾಡಿಲ್ಲ. ನಾಲ್ಕನೇ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಅವರಿಗೂ ಇಲ್ಲ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಪಕ್ಷದ ಅಭ್ಯರ್ಥಿ ಟಿ. ಎ.ಶರವಣ, ಮಾಜಿ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.