ಹಲ್ಲೆ ಮಾಡಿ ಓರ್ವರ ಸಾವಿಗೆ ಕಾರಣರಾದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ: ಪಿ.ಎಲ್.ಡಿ ಬ್ಯಾಂಕಿನ ಚುನಾವಣಾ ವಿಚಾರವಾಗಿ ದ್ವೇಷವಿಟ್ಟುಕೊಂಡು ದೊಣ್ಣೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಓರ್ವರ ಸಾವಿಗೆ ಕಾರಣರಾದ ಹಾಗೂ ಜಗಳ ಬಿಡಿಸಲು ಹೋದ ಇನ್ನಿಬ್ಬರಿಗೆ ಹಲ್ಲೆ ಮಾಡಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಇತರೆ ಇಬ್ಬರು ಆರೋಪಿಗಳಿಗೆ ತಲಾ 3 ತಿಂಗಳ ಸಾದಾ ಸಜೆ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.

ಕಳೆದ 2015ರ ಫೆಬ್ರವರಿ 19ರಂದು ಪಿ.ಎಲ್.ಡಿ ಬ್ಯಾಂಕಿನ ಚುನಾವಣಾ ವಿಚಾರವಾಗಿ ದ್ವೇಷವಿಟ್ಟುಕೊಂಡು ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಳ್ಳಿ ಗ್ರಾಮದ ಚೆನ್ನಮಲ್ಲಪ್ಪ ಅವರ ಮೇಲೆ ಪ್ರಕಾಶ ಎಂಬುವರು ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದರು.

ಈ ಸಂದರ್ಭದಲ್ಲಿ ಹೆಚ್.ವಿ ಬಸವರಾಜು, ಹೆಚ್.ಎಂ. ಬಸಪ್ಪ, ಶಂಕರ, ಮಹದೇವಪ್ಪ ಅವರು ಪ್ರಕಾಶ ಅವರ ಜೊತೆಗೂಡಿ ಬಂದಿದ್ದರು. ಜಗಳ ಬಿಡಿಸಲು ಹೋದ ಶಿವನಾಗಪ್ಪ ಮತ್ತು ಬಸವಣ್ಣ ಅಲಿಯಾಸ್ ಕಾಡಪ್ಪ ಅವರ ಮೇಲೂ ಬಸವರಾಜು ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಮಲ್ಲಪ್ಪ ನವರ ಮಗ ಮಹೇಶ್ ಅವರಿಗೂ ಶಂಕರ ಮತ್ತು ಮಹದೇವಪ್ಪ ಅವರು ಹಲ್ಲೆ ಮಾಡಿ ನೋವುಂಟು ಮಾಡಿದ್ದರು.

ಚೆನ್ನಮಲ್ಲಪ್ಪ ಅವರು ತೀವ್ರ ಸ್ವರೂಪದ ಗಾಯದಿಂದ ಮೈಸೂರು ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು 2015ರ ಮಾರ್ಚ್ 19ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಆರೋಪಿಗಳ ವಿರುದ್ದ ಬೇಗೂರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಈ ಸಮಯದಲ್ಲಿ ಹೆಚ್.ಎಂ. ಚೆನ್ನಬಸಪ್ಪ ಮತ್ತು ಶಂಕರ್ ಅವರು ಮೃತಪಟ್ಟಿರುತ್ತಾರೆ.

ಆರೋಪಿತರು ಕೃತ್ಯ ಎಸಗಿರುವುದು ಸಾಬೀತಾದ ಕಾರಣ ಒಂದನೇ ಆರೋಪಿ ಪ್ರಕಾಶ ಅವರಿಗೆ ಜೀವವಧಿ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ಹಾಗೂ ಒಂದು ಲಕ್ಷ ರೂಪಾಯಿ ಹಣವನ್ನು ಚೆನ್ನಮಲ್ಲಪ್ಪನವರಿಗೆ ಪರಿಹಾರ ರೂಪದಲ್ಲಿ ನೀಡುವಂತೆ ಆದೇಶಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತೀರ್ಪು ನೀಡಿದ್ದಾರೆ. ಎರಡನೇ ಆರೋಪಿ ಹೆಚ್.ವಿ. ಬಸವರಾಜು ಮತ್ತು ಐದನೇ ಆರೋಪಿ ಹೆಚ್.ಎಂ. ಮಹದೇವಪ್ಪ ಅವರಿಗೆ ತಲಾ 3 ತಿಂಗಳ ಸಾದಾ ಸಜೆ ಹಾಗೂ 15 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಹೆಚ್. ಲೋಲಾಕ್ಷಿ ಅವರು ವಾದ ಮಂಡಿಸಿದ್ದರು.