ಮದ್ದೂರು: ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿರುವ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.
ಯುವಜನರ ಪಾಲಿಗೆ ಭರವಸೆ ಮೂಡಿಸಿರುವ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಜಯಭೇರಿ ಬಾರಿಸುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರವಿಶಂಕರ್ ಪರವಾಗಿ ಸೋಮವಾರ ಮದ್ದೂರು ತಾಲೂಕಿನ ನಿಡಘಟ್ಟ, ಸೋಮನಹಳ್ಳಿ ಮತ್ತು ಕೊಪ್ಪಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ನಂತರ ಮಾತನಾಡಿದರು.
ಬಿಜೆಪಿ ನಾಡು ಮತ್ತು ದೇಶದ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಈ ಮೂಲಕ ರಾಜ್ಯವನ್ನು ಭರವಸೆಯ ನಾಡನ್ನಾಗಿ ಕಟ್ಟಲಾಗಿದೆ. ಇದನ್ನು ಕಂಡು ಹತಾಶವಾಗಿರುವ ಪ್ರತಿಪಕ್ಷಗಳು ಆಧಾರರಹಿತ ಆರೋಪಗಳನ್ನು ಮಾಡುತ್ತ ಬೇಜವಾಬ್ದಾರಿ ಪ್ರದರ್ಶಿಸುತ್ತಿವೆ ಎಂದು ಅವರು ಛೇಡಿಸಿದರು.
ಕಾಂಗ್ರೆಸ್ ನಾಯಕರು ಈಗ ಆರೆಸ್ಸೆಸ್ ವಿರುದ್ಧ ಚಡ್ಡಿ ಸುಡುವ ಮಾತನಾಡುತ್ತಿದ್ದಾರೆ. ಈ ಮೂಲಕ ಆ ಪಕ್ಷವು ತನ್ನ ಮೂರ್ಖತನದ ಪರಮಾವಧಿ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.
ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರಕಾರವು ಮುಕ್ತ ಮಾತುಕತೆಗೆ ಸಿದ್ಧವಿದೆ. ಆದರೆ ಕಾಂಗ್ರೆಸ್ಸಿಗೆ, ವಿಷಯ ಬಗೆಹರಿಯು ವುದು ಬೇಕಿಲ್ಲ. ಹೀಗಾಗಿ ಅದು ರಾಜಕೀಯ ಬಣ್ಣ ಬಳಿಯುತ್ತಿದೆ ಅಶ್ವಥ್ ನಾರಾಯಣ ಆರೋಪಿಸಿದರು.
ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಕೆಲವು ವಿಧ್ವಂಸಕ ಶಕ್ತಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಅವರ ನೇತೃತ್ವದ ಸಮಿತಿಯನ್ನೇ ವಿಸರ್ಜಿಸಿದ ಮೇಲೆ ಪ್ರತಿಭಟನೆಗೆ ಯಾವ ಅರ್ಥವಿದೆ ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು.