ಮಂಡ್ಯ: ರಾಜ್ಯದಲ್ಲಿ ವಿವಾದ ಎಬ್ಬಿಸಿರುವ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ಜಾಮಿಯಾ ಮಸೀದಿ ವಿವಾದಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅದು ಮಸೀದಿಯಲ್ಲ, ಮಂದಿರ ಎಂಬ ಹಿಂದೂ ಸಂಘಟನೆಗಳ ವಾದಕ್ಕೆ ಇದೀಗ ಆರ್ಕಿಯಾಲಜಿ ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಮಂದಿರ ಎಂದು ಉಲ್ಲೇಖ ಮಾಡಿರುವುದು ಬೆಳಕಿಗೆ ಬಂದಿದೆ.
ಈ ದಾಖಲೆಯೊಂದಿಗೆ ಹಿಂದೂ ಸಂಘಟನೆಗಳು ಕಾನೂನು ಹೋರಾಟಕ್ಕೆ ಮುಂದಾಗಿವೆ.
ಕಳೆದ ಒಂದು ವಾರದಿಂದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದ, ದಿನಕ್ಕೊಂದು ತಿರುವು ಪಡೆಯುತ್ತಿದೆ.
ಈ ವಿವಾದದ ಸಂಬಂಧ ದಶಕಗಳ ಹಿಂದಿನ ಪುಸ್ತಕವೊಂದು ಪತ್ತೆಯಾಗಿದ್ದು, ಈ ಮೂಲಕ ಪುರಾತತ್ವ ಇಲಾಖೆಗೆ ಸಂಬಂಧಿಸಿದ ದಾಖಲೆ ಸಿಕ್ಕಿದಂತಾಗಿದೆ.
ಕೆಲ ದಿನಗಳ ಹಿಂದೆ ಬಾಲಗಣಪತಿ ಭಟ್ಟ ಎಂಬುವರು ಬರೆದಿದ್ದ ಮೂಡಲ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಸುಪ್ರಭಾತ ಎಂಬ ಪುಸ್ತಕ ದೊರೆತಿತ್ತು.
ದಶಕಗಳ ಹಿಂದೆಯೇ ಬರೆಯಲಾಗಿದ್ದ ಈ ಪುಸ್ತಕದಲ್ಲಿ, ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವನ್ನು ಕೆಡವಿ ಅಲ್ಲಿನ ಅರ್ಚಕರ ಕೈ ಕತ್ತರಿಸಿದ್ದಲ್ಲದೆ, ಅಲ್ಲಿದ್ದ ವಿಗ್ರಹವನ್ನು ಕಾವೇರಿ ನದಿಗೆ ಎಸೆದು ಆ ಜಾಗದಲ್ಲಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂದು ಉಲ್ಲೇಖವಾಗಿದೆ.
ಇದೀಗ ಪ್ರಧಾನಿ ಮೋದಿ ಮಂಚ್ ವಿಚಾರ ವೇದಿಕೆಯು ಇನ್ನೊಂದು ಅಧಿಕೃತ ದಾಖಲೆಯನ್ನು ಬಿಡುಗಡೆ ಮಾಡಿದೆ.
1912ರಲ್ಲಿ ಪ್ರಕಟವಾದ ಆರ್ಕಿಯಾಲಜಿ (ಪುರಾತತ್ತ್ವ ಶಾಸ್ತ್ರ) ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಜಾಮಿಯಾ ಮಸೀದಿ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಮಸೀದಿ ಮತ್ತು ಮಿನಾರ್ ನಿರ್ಮಾಣದ ಉದ್ದೇಶದಿಂದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಾಶಪಡಿಸಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂಬ ವಿಷಯ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಇನ್ನು, ಇಲ್ಲಿದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ವಿಗ್ರಹವನ್ನು ಕಾವೇರಿ ನದಿಯ ಗೌರಿಘಡ ಎಂಬಲ್ಲಿ ಎಸೆಯಲಾಗಿತ್ತು.
ಟಿಪ್ಪು ಸುಲ್ತಾನ್ ನಿಧನದ ನಂತರ ದಳವಾಯಿ ದೊಡ್ಡಯ್ಯ ಅವರು ದೇಣಿಗೆ ಸಂಗ್ರಹಿಸಿ ಶ್ರೀರಂಗ ಪಟ್ಟಣದ ಪೇಟೆ ಬೀದಿಯಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಮರು ಸ್ಥಾಪನೆ ಮಾಡಿದ್ದರು ಎಂಬ ಅಂಶವಿದೆ.
ಈಗ ಬಿಡುಗಡೆ ಮಾಡಿರೋ ಪುಸ್ತಕದಿಂದ ಟಿಪ್ಪು ಸುಲ್ತಾನ್ ಓರ್ವ ವಿಗ್ರಹ ಭಂಜಕ ಎಂಬುದು ರುಜುವಾತು ಆಗಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಇರುವ ಪಠ್ಯ ಪುಸ್ತಕದ ವಿಚಾರಗಳನ್ನು ಕೈ ಬಿಡಬೇಕೆಂದು ಮೋದಿ ವಿಚಾರ ಮಂಚ್ ವೇದಿಕೆಯ ಪದಾಕಾರಿಗಳು ಸರ್ಕಾರವನ್ನು ಆಗ್ರಹ ಮಾಡುತ್ತಿದ್ದಾರೆ.