ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚುನಾವಣಾ ಸಿಬ್ಬಂದಿ ಕೊಟ್ಟ ಪೆನ್ ಸರಿಯಾಗಿ ಬರೆಯದೆ, ಬರೆದದ್ದು ಸರಿಯಾಗಿ ಕಾಣದೆ ಇರೋದರಿಂದ ಅಸಮಾಧಾನಗೊಂಡ ಶಾಸಕ ಪುಟ್ಟರಂಗಶೆಟ್ಟಿ ಗರಂ ಆದ ಘಟನೆ ಚಾಮರಾಜನಗರದ ಯಳಂದೂರಲ್ಲಿ ನಡೆಯಿತು.
ಚಾಮರಾಜನಗರ ಯಳಂದೂರು ಮತದಾನ ಕ್ಷೇತ್ರ ಯಳಂದೂರು ತಾಲ್ಲೋಕು ಕಚೇರಿಯಲ್ಲೂ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಬ್ಯಾಲೆಟ್ ಪೇಪರ್ನಲ್ಲಿ ಸಿಬ್ಬಂದಿ ಕೊಟ್ಟಿರುವ ಪೆನ್ ನಲ್ಲಿ ಬರೆದರೆ ಸರಿಯಾಗಿ ಕಾಣುವುದೇ ಇಲ್ಲ. ನಾವು ಯಾರಿಗೆ ಮತದಾನ ಮಾಡಿದ್ದೇವೆಂದು ಗೊತ್ತಾಗುವುದು ಹೇಗೆ? ಎಂದು ಶಾಸಕ ಪುಟ್ಟರಂಗಶೆಟ್ಟಿ ಮತಗಟ್ಟೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ನಾವು ತಂದಿರುವುದಲ್ಲ ಸರ್, ಇಲಾಖೆಯೇ ಕೊಟ್ಟಿರುವ ಪೆನ್ ಇದು ಎಂದು ಸಿಬ್ಬಂದಿ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರಾದರೂ, ಪುಟ್ಟರಂಗಶೆಟ್ಟಿ ಕೋಪ ತಣಿಯಲಿಲ್ಲ. ಅಸಮಾಧಾನದಿಂದಲೇ ಮತದಾನ ಮಾಡಿ ಮತಗಟ್ಟೆಯಿಂದ ನಿರ್ಗಮಿಸಿದರು.