ಹಾಸನ: ದುಷ್ಕರ್ಮಿಯೊಬ್ಬ ಮಾಂಗಲ್ಯ ಸರ ಕೀಳಲು ಹೋದ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಮಹಿಳೆಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಗರಕ್ಕೆ ಸಮೀಪದ ಗವೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ನೀಲಾ(೫೦) ಕೊಲೆಯಾಗಿರುವ ಮಹಿಳೆ.
ಗವೇನಹಳ್ಳಿ ಗ್ರಾಮದ ಕಾಲುದಾರಿಯಲ್ಲಿ ಮಹಿಳೆ ಮನೆಗೆ ವಾಪಸಾಗುತ್ತಿದ್ದಾಗ ಏಕಾಏಕಿ ಭರತ್ ಎಂಬ ಕಳ್ಳ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಸಿದ್ದಾನೆ.
ಈ ವೇಳೆ ನೀಲಾ ವಿರೋಧಿಸಿದ ಕಾರಣ ಪಕ್ಕದಲ್ಲೇ ಇದ್ದ ಕೆರೆಗೆ ತಳ್ಳಿದ್ದಾನೆ. ಆಕೆ ಚೀರಾಡಿ ಸಹಾಯಕ್ಕೆ ಕೂಗಿದ್ದಾರೆ.
ಸ್ಥಳೀಯರು ಬರುವಷ್ಟರಲ್ಲಿ ನೀರಿನಿಂದ ಹೊರಬರಲಾರದೆ ಆಕೆ ಸಾವನ್ನಪ್ಪಿದ್ದಾರೆ.
ಮಹಿಳೆ ಚೀರಾಟ ಗಮನಿಸಿದ್ದ ಸ್ಥಳೀಯರು ಓಡಿ ಹೋಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರದ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು. ಆರೋಪಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ಭರತ್ ಗೆ ಕಠಿಣ ಶಿಕ್ಷೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.