ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಯೋಗ ದಿನಾಚರಣೆ ಆಚರಿಸಲು ಅನುಮತಿ ನೀರಾಕರಿಸಲಾಗಿದೆ.
ಈದ್ಗಾ ಮೈದಾನದಲ್ಲಿ ಜೂ 21 ರಂದು ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ನಡೆಸಲು ಅನುಮತಿ ನೀಡುವಂತೆ ಹಲವು ಹಿಂದೂ ಸಂಘಟನೆಗಳು ಬಿಬಿಎಂಪಿಗೆ ಮನವಿ ಪತ್ರ ಸಲ್ಲಿಸಿದ್ದವು.
ಈದ್ಗಾ ಮೈದಾನ ವಕ್ಫ್ ಬೋರ್ಡ್‍ಗೆ ಸೇರಿದ್ದೋ ಅಥವಾ ಬಿಬಿಎಂಪಿಗೆ ಸೇರಿದ್ದೋ ಎನ್ನುವುದು ಇನ್ನು ಖಚಿತಗೊಂಡಿಲ್ಲ, ಹೀಗಾಗಿ ಯೋಗಾ ದಿನಾಚರಣೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ ಎಂದು ಅಧಿಕಾರಿಗಳು ಘೋಷಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಕ್ ಬೋರ್ಡ್ ಸದಸ್ಯರು ಮೈದಾನ ನಮಗೆ ಸೇರಿದ್ದು ಎಂದು ವಾದ ಮಂಡಿಸಿದ್ದರು.
ಹೀಗಾಗಿ ಆಸ್ತಿ ನಿಮಗೆ ಸೇರಿದ್ದು ಎನ್ನುವುದಕ್ಕೆ ಸಮರ್ಪಕ ದಾಖಲೆ ಸಲ್ಲಿಸುವಂತೆ ಬಿಬಿಎಂಪಿ ಅಧಿಕಾರಿಗಳು ವಕ್ ಬೋರ್ಡ್‍ಗೆ ಸೂಚನೆ ನೀಡಿತ್ತು.
ವಕ್ ಬೋರ್ಡ್‍ನವರು ಈದ್ಗಾ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಬಿಎಂಪಿಗೆ ಸಲ್ಲಿಸಿದ್ದಾರೆ. ಈ ರೀತಿ ಸಲ್ಲಿಕೆಯಾದ ದಾಖಲೆಗಳನ್ನು ಬಿಬಿಎಂಪಿ ಅಧಿಕಾರಿಗಳು ಕಾನೂನು ಕೋಶಕ್ಕೆ ರವಾನಿಸಿದ್ದಾರೆ. ಕಾನೂನು ಇಲಾಖೆಯಿಂದ ಈದ್ಗಾ ಮೈದಾನ ಯಾರ ಸ್ವತ್ತು ಎನ್ನುವುದರ ಕುರಿತು ವರದಿ ಬರಲು ಇನ್ನು ಒಂದು ವಾರಗಳ ಸಮಯವಕಾಶ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮೈದಾನದಲ್ಲಿ ಯೋಗಾ ದಿನಾಚರಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.