ಡಾ.ಗುರುಪ್ರಸಾದ ರಾವ್ ಹವಾಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
ಮರಿಯಮ್ಮನ ಹಳ್ಳಿ
dr.guruhs@gmail.com
ಪಿಯುಸಿ ಫಲಿತಾಂಶವು ನಿನ್ನೆ ಪ್ರಕಟವಾಗಿದೆ. ಪಿಯುಸಿ ನಂತರ ಮುಂದೇನು ಎಂಬ ಯಕ್ಷ ಪ್ರಶ್ನೆ ವಿದ್ಯಾರ್ಥಿ ಪೋಷಕರಲ್ಲಿ ಕಾಡುತ್ತಿರುತ್ತದೆ . ಯಾವ ಕೋರ್ಸ್ ತೆಗೆದುಕೊಂಡರೆ ಬೇಗ ಕೆಲಸ ಸಿಗತ್ತೆ? ಯಾವ ಕೋರ್ಸಿಗೆ ಸದ್ಯ ಮೌಲ್ಯ ಜಾಸ್ತಿ ಇದೆ? ಈ ಬಗ್ಗೆ ಸ್ನೇಹಿತರ ಬಳಿ ಚರ್ಚೆ ಮಾಡೋದಾ? ಶಿಕ್ಷಕರನ್ನೇ ಮಾತನಾಡಿಸೋದಾ ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ವಿದ್ಯಾರ್ಥಿ, ಪೋಷಕರ ತಲೆಯೊಳಗೂ ಓಡಾಡುತ್ತಿರುತ್ತವೆ ?
ಇಂದಿನ ಆಧುನಿಕ, ಯಾಂತ್ರಿಕ ಬದುಕಿಗೆ ಶಿಕ್ಷಣ ಅತ್ಯಗತ್ಯ ಜೊತೆಗೆ ಉತ್ತಮ ಕೆಲಸವೂ ಅಗತ್ಯ. ಜೀವನವನ್ನು ಉನ್ನತ ರೀತಿಯಲ್ಲಿ ಸಾಗಿಸಲು ಎಷ್ಟು ಸಂಬಳವಿದ್ದರೂ ಸಾಲುವುದಿಲ್ಲ ಹಾಗಾಗಿ ಪಿಯುಸಿ ಓದಿದ ವಿದ್ಯಾರ್ಥಿಗಳು ಯಾವೆಲ್ಲಾ ಕೋರ್ಸ್ ಮಾಡಿದ್ರೆ ಕೈ ತುಂಬಾ ಸಂಬಳ ಪಡೆಯಬಹುದು . ಇಲ್ಲಿ ಹೇಳಿರುವ ಯಾವ ಕೋರ್ಸ್ ನಿಮ್ಮ ಆಸಕ್ತಿಗೆ ಸೂಕ್ತವಾಗಿದೆ. ಯಾವ ಕೋರ್ಸ್ ನಿಮಗಿಷ್ಟ ಎಂದು ಗುರುತಿಸಿ ಅಧ್ಯಯನ ಮಾಡಿ ನಿಮ್ಮ ವೃತ್ತಿ ಬದುಕು ರೂಪಿಸಿಕೊಳ್ಳಬಹುದು.
ಮೊದಲನೆಯದಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಇರುವ ಆಯ್ಕೆಗಳು
1. ಬಿ.ಎ.- ಬ್ಯಾಚುಲರ್ ಆಫ್ ಆರ್ಟ್ಸ್- 4 ವರ್ಷ ಅವಧಿಯ ಕೋರ್ಸ್
2. ಬಿ.ಎಂ.ಎಸ್- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ – 4 ವರ್ಷ ಅವಧಿಯ ಕೋರ್ಸ್
3. ಬಿ.ಎಫ್.ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ – 4 ವರ್ಷ ಅವಧಿಯ ಕೋರ್ಸ್
4. ಬಿ.ಜೆ.ಎಂ- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ- 2ರಿಂದ 4ವರ್ಷ ಅವಧಿಯ ಕೋರ್ಸ್
5. ಬಿ.ಹೆಚ್.ಎಂ- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ – 4 ವರ್ಷ ಅವಧಿಯ ಕೋರ್ಸ್
6. ಬಿ.ಇ.ಎಂ- ಬ್ಯಾಚುಲರ್ ಆಫ್ ಈವೆಂಟ್ ಮ್ಯಾನೇಜ್ಮೆಂಟ್- 3 ರಿಂದ 4 ವರ್ಷ ಅವಧಿಯ ಕೋರ್ಸ್
7. ಬಿ.ಎಫ್.ಡಿ- ಬ್ಯಾಚುಲರ್ ಆಫ್ ಫ್ಯಾಷನ್ ಡಿಸೈನಿಂಗ್ -4 ವರ್ಷ ಅವಧಿಯ ಕೋರ್ಸ್
8. ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್ – 4 ವರ್ಷ ಅವಧಿಯ ಕೋರ್ಸ್
9. ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಷನ್ – 1 ವರ್ಷ ಅವಧಿಯ ಕೋರ್ಸ್
10. ಬಿ.ಎಸ್.ಡಬ್ಲ್ಯೂ- ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ – 4 ವರ್ಷ ಅವಧಿಯ ಕೋರ್ಸ್
11. ಬಿ.ಆರ್ಎಂ- ಬ್ಯಾಚುಲರ್ ಆಪ್ ರೀಟೇಲ್ ಮ್ಯಾನೇಜ್ಮೆಂಟ್ – 4 ವರ್ಷ ಅವಧಿಯ ಕೋರ್ಸ್
12. ಬಿ.ಬಿ.ಎಸ್- ಬ್ಯಾಚುಲರ್ ಆಫ್ ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡೀಸ್- 4ವರ್ಷ ಅವಧಿಯ ಕೋರ್ಸ್
13. ಇಂಟಿಗ್ರೇಟೆಡ್ ಲಾ ಕೋರ್ಸ್- ಬಿಎ+ಎಲ್ಎಲ್ಬಿ – 5 ವರ್ಷ ಅವಧಿಯ ಕೋರ್ಸ್
14. ಬಿ.ಟಿ.ಟಿ.ಎಂ – ಬ್ಯಾಚುಲರ್ ಆಪ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್ಮೆಂಟ್ ಕೋರ್ಸ್ – 3 ರಿಂದ 4 ವರ್ಷ ಅವಧಿಯ ಕೋರ್ಸ್
15. ಟೀಚರ್ ಟ್ರೈನಿಂಗ್ ಕೋರ್ಸ್
ಇದಲ್ಲದೇ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದವರು ಮುಂದಿನ ದಿನಮಾನಗಳಲ್ಲಿ ಎಫ್ ಡಿ ಎ, ಎಸ್ ಡಿ ಎ, ಕೆಎ ಎಸ್, ಐಎಎಸ್, ಐಪಿಎಸ್ ಅಂತಹ ಅತ್ತ್ಯುನ್ನತ ಹುದ್ದೆಯ ಪರೀಕ್ಷೆಗಳನ್ನು ತೆಗೆದು ಕೊಳ್ಳಲು ಸಹಾಯಕವಾಗುತ್ತದೆ.
ಬ್ಯಾಚುಲರ್ ಆಫ್ ಲಾ:
ವಕೀಲ ವೃತ್ತಿ ತುಂಬಾನೆ ಶ್ರೇಷ್ಠ ಅನ್ನೋ ಮಾತಿದೆ ಹಾಗೆ ಒಂದು ಕೇಸ್ ಅನ್ನು ಬೇಗ ಗೆದ್ದರೆ ಸಾಕು ಉತ್ತಮ ಸಂಬಳ ಪಡೆಯಬಹುದು. ಈ ರೀತಿ ವಕೀಲ ವೃತ್ತಿಯಲ್ಲಿ ಒಂದು ತಿಂಗಳಲ್ಲೇ ಹೆಚ್ಚು ಸಂಬಳವನ್ನು ಪಡೆಯಬಹುದು.
ನೀವು ವಕೀಲ / ವಕೀಲೆಯಾಗಬೇಕು ಅಂದ್ರೆ ಎಲ್ಎಲ್ಬಿ ಪದವಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಮಾಡಿರಬೇಕು ಮತ್ತು ಅಭ್ಯರ್ಥಿಗಳು ಆಲ್ ಇಂಡಿಯಾ ಬಾರ್ ಎಕ್ಸಾಮಿನೇಷನ್ (ಎಐಬಿಇ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇಷ್ಟು ಮಾಡಿದ್ರೆ ಸಾಕು ನೀವು ವಕೀಲ ವೃತ್ತಿಯಲ್ಲಿ ತೊಡಗಬಹುದು. ಇನ್ನೂ ವಕೀಲ / ವಕೀಲೆ ವೃತ್ತಿಯಲ್ಲಿ ವರ್ಷಕ್ಕೆ 8 ರಿಂದ 10 ಲಕ್ಷದ ವರೆಗೂ ವೇತನವನ್ನು ಪಡೆಯಬಹುದು
ವಿಜ್ಞಾನ ವಿಭಾಗದ PCM ಓದಿದ ವಿದ್ಯಾರ್ಥಿಗಳು ಈ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು :
1. ಎಂಬಿಬಿಎಸ್ 2. ಬಿ.ಫಾರ್ಮೆಸಿ 3. ಬಿ.ಎಸ್ಸಿ. ನರ್ಸಿಂಗ್ 4. ಬ್ಯಾಚುಲರ್ ಆಫ್ ಫಿಸಿಯೋಥೆರಪಿ 5. ಇತರೆ ಬಿ.ಎಸ್ಸಿ ಕೋರ್ಸ್ಗಳು 6. ಇತರೆ ಪದವಿ ಕೋರ್ಸ್ಗಳು
ಜೀವಶಾಸ್ತ್ರ ಮತ್ತು ಗಣಿತ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಕೋರ್ಸ್ಗಳ ವಿವರ:
1. ಏರ್ಹೋಸ್ಟೆಸ್ ಟ್ರೈನಿಂಗ್ 2. ಇವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್ಗಳು 3. ಹಾಸ್ಪಿಟಾಲಿಟಿ ಡಿಪ್ಲೋಮ ಕೋರ್ಸ್ಗಳು 4. ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ 5. ವೆಬ್ಡೆವಲಪ್ಮೆಂಟ್ ಮತ್ತು ಡಿಸೈನಿಂಗ್
ಮರೈನ್ ಇಂಜಿನಿಯರಿಂಗ್ :
ಸಾಮಾನ್ಯವಾಗಿ ಮಾಡುವ ಕೋರ್ಸ್ಗಗಳ ಬದಲು ಸ್ವಲ್ಪ ವಿಭಿನ್ನವಾಗಿ ಮಾಡುವ ಬಯಕೆ ಇದ್ದರೆ ಇದು ನಿಮಗೆ ಸೂಕ್ತವಾಗಬಹುದು. ಈ ವೃತ್ತಿ ಮಾಡೋಕೆ ಇಷ್ಟಪಡುವವರು ಬಿ.ಎಸ್ಸಿ ಇನ್ ಮೆಕ್ಯಾನಿಕಲ್ ಅಥವಾ ಮರೈನ್ ಇಂಜಿನಿಯರಿಂಗ್ ಕೋರ್ಸ್ ಮಾಡಬೇಕು. ಮರ್ಚಾಂಟ್ ನೇವಿ ವೃತ್ತಿ ಮಾಡೋಕೆ ಇಷ್ಟ ಪಡುವವರು ಬಿ.ಎಸ್ಸಿ ಇನ್ ಮೆಕ್ಯಾನಿಕಲ್ ಅಥವಾ ಮರೈನ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಮಾಡಬಹುದು.
ಈ ಕೆಲಸಕ್ಕೆ ಸೇರಿದರೆ ತಿಂಗಳಿಗೆ 7 ರಿಂದ 8 ಲಕ್ಷದವರೆಗೂ ವೇತನವನ್ನು ಪಡೆಯಬಹುದು ಗೊತ್ತಾ? ಹಾಗೆ ಬೇರೆ ಉದ್ಯೋಗಗಳಿಗೆ ಹೋಲಿಸಿದರೆ ವರ್ಷಕ್ಕೆ ಹೆಚ್ಚು ವೇತನವನ್ನು ಪಡೆಬಹುದು.
ಸೆರಾಮಿಕ್ಸ್ ಡಿಸೈನಿಂಗ್
ಸೆರಾಮಿಕ್ಸ್ ಡಿಸೈನಿಂಗ್ ವಿಷಯದಲ್ಲಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್ಗಳೂ ಲಭ್ಯವಿವೆ. ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್, ಮೂರು ವರ್ಷದ ಸರ್ಟಿಫಿಕೇಟ್ ಕೋರ್ಸ್ಗಳೂ ಇವೆ. ದೇಶದಲ್ಲಿ ಹಲವು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಗೃಹವಿಜ್ಞಾನ ಕಾಲೇಜುಗಳು ಇಂತಹ ಕೋರ್ಸ್ಗಳನ್ನು ನಡೆಸುತ್ತಿವೆ. ಆದರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್– ಎನ್ಐಡಿ ನಡೆಸುವ ನಾಲ್ಕು ವರ್ಷಗಳ ಕೋರ್ಸ್ಗೆ ಹೆಚ್ಚು ಬೇಡಿಕೆ ಇದೆ.
ಗೃಹನಿರ್ಮಾಣ, ಒಳಾಂಗಣ ಅಲಂಕಾರ, ಆಲಂಕಾರಿಕ ವಸ್ತುಗಳು ಮತ್ತು ಅಡುಗೆಮನೆ ಬಳಕೆಯ ವಸ್ತುಗಳಿಗೆ ಯಾವತ್ತೂ ಬೇಡಿಕೆ ಕುಂದುವುದಿಲ್ಲವಾದ ಕಾರಣ ಈ ಕ್ಷೇತ್ರದಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಉದ್ಯೋಗ ನಷ್ಟದ ಭೀತಿ ಕಡಿಮೆ. ಸೆರಾಮಿಕ್ಸ್ ಉದ್ಯಮ ಆರಂಭಿಸುವ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಈ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಜನಪ್ರಿಯ ಕಂಪನಿಗಳು ಕ್ಯಾಂಪಸ್ನಲ್ಲಿಯೇ ಆಯ್ಕೆ ಮಾಡಿಕೊಳ್ಳುತ್ತವೆ. ಸ್ವಂತ ಉದ್ಯಮ ಆರಂಭಿಸಲು ಅವಕಾಶವಿದೆ
ಅಪ್ಲೈಡ್ ಹೆಲ್ತ್ ಸೈನ್ಸ್
ಮೆಡಿಕಲ್ ಅಥವಾ ಡೆಂಟಲ್ನಲ್ಲಿ ಅವಕಾಶ ಸಿಗದವರು ಈ ಕೋರ್ಸ್ ಮಾಡಿ ಉದ್ಯೋಗ ಭವಿಷ್ಯ ಕಟ್ಟಿಕೊಳ್ಳಬಹುದು. ಮುಖ್ಯವಾಗಿ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ಪ್ಯಾರಾ ಮೆಡಿಕಲ್ ಪ್ರಾಕ್ಟೀಸ್ ಅರ್ಹತೆಯನ್ನು ಒದಗಿಸುತ್ತದೆ. ಇವರು ವ್ಯಾಯಾಮ ಮತ್ತು ಥೆರಪಿಗಳ ಮೂಲಕ ದೈಹಿಕ ನೋವನ್ನು ಗುಣಪಡಿಸುತ್ತಾರೆ. ಇದರಲ್ಲಿ ಫಿಸಿಯೋಲಜಿ ಮತ್ತು ಮೆಡಿಕಲ್ ಸೈನ್ಸ್ ಕೂಡ ಇರುತ್ತದೆ.
ಬ್ಯಾಚುಲರ್ ಆಫ್ ಅಕ್ಯುಪೇಶನಲ್ ಥೆರಪಿಯನ್ನು ಕೂಡ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ನರವ್ಯೂಹದ ಸಮಸ್ಯೆಯಿಂದ ಬಳಲುವ ರೋಗಿಗಳನ್ನು ಇವರು ಶುಶ್ರೂಷೆ ಮಾಡಬೇಕಾಗುತ್ತದೆ. ಫಂಕ್ಷನಲ್ ಟ್ರೈನಿಂಗ್, ಅಸಿಸ್ಟಿವ್ ಏಡ್ ಆಂಡ್ ಇಕ್ಯೂಪ್ಮೆಂಟ್, ಆರ್ಗೋನಾಮಿಕ್, ಟ್ರೈನಿಂಗ್ ಆಂಡ್ ಅಡಾಪ್ಶನ್ ಮೊದಲಾದ ನಾನಾ ವಿಧದ ಚಿಕಿತ್ಸಕ ಪದ್ಧತಿಗಳನ್ನು ಇದರಲ್ಲಿ ಕಲಿಸಲಾಗುತ್ತದೆ.
ಇನ್ನು ಬಿಎಸ್ಸಿ ಇನ್ ಹಿಯರಿಂಗ್ ಆಂಡ್ ಲ್ಯಾಂಗ್ವೇಜ್, ಸ್ಪೀಚ್, ಪ್ಯಾಥೋಲಜಿ, ಆಡಿಯೋಲಜಿ ಆಂಡ್ ಥೆರಪಿ ಕೋರ್ಸ್ ಕೂಡ ಮಾಡಬಹುದು. ಇದರಲ್ಲಿ ವಿದ್ಯಾರ್ಥಿಗಳಿಗೆ ಮಾತು ಮತ್ತು ಶ್ರವಣ ದೋಷವಿರುವ ರೋಗಿಗಳ ಚಿಕಿತ್ಸೆಯನ್ನು ಕಲಿಸಲಾಗುತ್ತದೆ. ಇದಲ್ಲದೆ ಬ್ಯಾಚುಲರ್ ಆಫ್ ಆಯುರ್ವೇದಿಕ್ ಹೋಮಿಯೋಪಥಿ ಮೆಡಿಸಿಲ್ ಮಾಡಿದರೆ ಅಲೋಪತಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಪಡೆಯಬಹುದು.
ಪೈಲಟ್ ಟ್ರೈನಿಂಗ್ ಸ್ಕೂಲ್:
ಪಿಯುಸಿ ಸೈನ್ಸ್ ಬ್ಯಾಕ್ಗ್ರಾಂಡ್ನಿಂದ ಬಂದ ವಿದ್ಯಾರ್ಥಿಗಳು ಕಮರ್ಷಿಯಲ್ ಪೈಲಟ್ ಪ್ರೊಫೆಷನ್ಗೆ ಹೋಗಬಹುದು. ಈ ಪ್ರೊಫೆಷನ್ಗೆ ಹೋಗಬೇಕು ಅಂತ ಆಸೆ ಇದ್ದರೆ ಪಿಯುಸಿ ನಂತರ ಏರ್ ಫ್ಲೈಯಿಂಗ್ ಸ್ಕೂಲ್ಗೆ ಸೇರಿಕೊಳ್ಳಬೇಕಿರುತ್ತದೆ. ತರಬೇತಿ ಪಡೆದ ನಂತರ ಕಮರ್ಷಿಯಲ್ ಪೈಲಟ್ ಉದ್ಯೋಗಕ್ಕೆ ಸೇರಿಕೊಳ್ಳಬಹುದು.
ಬಿಎಸ್ಸಿ ವಿಷುಯಲ್ ಮೀಡಿಯಾ/ಕಮ್ಯೂನಿಕೇಷನ್:
ಇನ್ನು ಚಿತ್ರರಂಗದಲ್ಲಿ ಮತ್ತು ಮಾಧ್ಯಮಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕೋರ್ಸ್ ಉತ್ತಮವಾಗಿದೆ. ಈ ಕೋರ್ಸ್ನಲ್ಲಿ ವಿಡಿಯೋ ಎಡಿಟಿಂಗ್, ಕ್ಯಾಮೆರಾದಿಂದ ಹಿಡಿದು ಮಾಧ್ಯಮಕ್ಕೆ ಬೇಕಾಗುವ ವಿಷಯಗಳನ್ನು ಸಹ ಕಲಿಸಲಾಗುತ್ತದೆ.
ಬಿಸಿಎಸ್ ಅಥವಾ ಎಂಎಸ್ ಇನ್ ಕಂಪ್ಯೂಟರ್ ಸೈನ್ಸ್:
ಕೆಲಸ ತುಂಬಾನೆ ಲಾಭದಾಯಕವಾಗಿರಬೇಕು ಮತ್ತು ಇಷ್ಟವಾಗುವ ಕೆಲಸ ನಿಮ್ಮದಾಗಬೇಕು ಅಂದ್ರೆ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಸಿಎಸ್ ಅಥವಾ ಎಂಎಸ್ ಕೋರ್ಸ್ ಮಾಡಿ.
ಬಿಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್ ಇನ್ಫಾರ್ಮೇಶನ್ ಟೆಕ್ನಾಲಜಿ ಕೋರ್ಸ್, ಕಂಪ್ಯೂಟರ್ ಎಂಜಿನಿಯರಿಂಗ್ ಪ್ರೋಗ್ರಾಮಿಂಗ್ಗೆ ಪರ್ಯಾಯ ಕೋರ್ಸ್. ಸಾಫ್ಟ್ವೇರ್ ಡೆವಲಪ್ಮೆಂಟ್ನಲ್ಲಿ ಆಸಕ್ತಿ ಇರುವವರು ಇದನ್ನು ಮಾಡಬಹುದು. ಕಂಪ್ಯೂಟರ್ ನೆಟ್ವರ್ಕ್, ಇನ್ಫಾರ್ಮೇಶನ್ ಸಿಸ್ಟಂನ ಕುರಿತಂತೆ ವಿದ್ಯಾರ್ಥಿಗಳಿಗೆ ಇದರಲ್ಲಿ ತರಬೇತಿ ನೀಡಲಾಗುತ್ತದೆ.
ಈ ಕೋರ್ಸ್ ಮಾಡಿದ್ರೆ ಸಾಫ್ಟ್ವೇರ್ ಇಂಜಿನಿಯರ್ ಆಗಬಹುದು. ಐಟಿ ಕ್ಷೇತ್ರದಲ್ಲಿ 10 ರಿಂದ 20 ವರ್ಷಗಳ ಕೆಲಸದ ಅನುಭವ ಪಡೆದರೆ ನಂತರ ವರ್ಷಕ್ಕೆ 22 ಲಕ್ಷ ವೇತನವನ್ನು ಪಡೆಯಬಹುದು ಗೊತ್ತಾ?
ಪಿಯುಸಿಯಲ್ಲಿ ವಾಣಿಜ್ಯ ವಿಷಯದಲ್ಲಿ ಓದಿದ ವಿದ್ಯಾರ್ಥಿಗಳು ಈ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು
1. ಬಿ.ಕಾಂ. – ಬ್ಯಾಚುಲರ್ ಆಫ್ ಕಾಮರ್ಸ್ -3 ವರ್ಷ ಅವಧಿಯ ಕೋರ್ಸ್
2. ಲಾ (ಕಾನೂನು)- 5 ವರ್ಷ ಅವಧಿಯ ಕೋರ್ಸ್
3. ಸಿ.ಎ. (ಚಾರ್ಟೆಡ್ ಅಕೌಂಟೆನ್ಸಿ)
4. ಬಿ.ಬಿ.ಎ.- ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ -3 ವರ್ಷ ಅವಧಿಯ ಕೋರ್ಸ್
5. ಬಿ.ಇ- ಬ್ಯಾಚುಲರ್ ಆಫ್ ಎಕನಾಮಿಕ್ಸ್ -3 ವರ್ಷ ಅವಧಿಯ ಕೋರ್ಸ್
6. ಸಿ.ಎಸ್. (ಕಂಪೆನಿ ಸೆಕ್ರೆಟರ್) ಕೋರ್ಸ್
7. ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ – 1 ರಿಂದ 3 ವರ್ಷ ಅವಧಿಯ ಕೋರ್ಸ್
8. ಬ್ಯಾಚುಲರ್ ಆಫ್ ಸ್ಟ್ಯಾಟಿಸ್ಟಿಕ್ಸ್
9. ಆಕ್ಟುರಿಯಲ್ ಸೈನ್ಸ್
10. ಸಿ.ಎಂ.ಎ.
11. ಬಿ.ಬಿ.ಎಸ್ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡೀಸ್- 3 ವರ್ಷ ಅವಧಿಯ ಕೋರ್ಸ್
12. ಬಿ.ಹೆಚ್.ಎಂ- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್- 4 ವರ್ಷ ಅವಧಿಯ ಕೋರ್ಸ್
13. ಬಿ.ಎಫ್.ಎ- ಬ್ಯಾಚುಲರ್ ಆಫ್ ಫಿನಾನ್ಸ್ ಮತ್ತು ಅಕೌಂಟಿಂಗ್- 3 ವರ್ಷ ಅವಧಿಯ ಕೋರ್ಸ್
14. ಬಿ.ಸಿಎ. ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ – 3 ವರ್ಷ ಅವಧಿಯ ಕೋರ್ಸ್
15. ಬಿ.ಎಸ್.ಡಬ್ಲ್ಯೂ- ಬ್ಯಾಚುಲರ್ ಆಪ್ ಸೋಷಿಯಲ್ ವರ್ಕ್-3 ವರ್ಷ ಅವಧಿಯ ಕೋರ್ಸ್
ಕಾಮರ್ಸ್ ಮ್ಯಾನೇಜ್ಮೆಂಟ್
ಬಿಎಸ್ಸಿ ಇನ್ ಅಪ್ಲೈಡ್ ಸ್ಟಾಟಿಸ್ಟಿಕ್ಸ್ ಆಂಡ್ ಅನಾಲಿಟಿಕ್ಸ್ ಕೋರ್ಸ್ ಇದರಲ್ಲಿ ಪ್ರಮುಖವಾಗಿ ಎಕನಾಮಿಕ್ಸ್, ಮ್ಯಾಥ್ಸ್, ಸ್ಟಾಸ್ಟಿಟಿಕ್ಸ್, ಕಂಪ್ಯೂಟರ್ ಸೌನ್ಸ್ ಮತ್ತು ಬಾಹ್ಯ ತರಬೇತಿಗಾಗಿ ಪ್ರಾಜೆಕ್ಟ್ಗಳಿಗೆ ಭೇಟಿ ನೀಡಿ ಖುದ್ದು ಮಾಹಿತಿ ಕಲಿಸಲಾಗುತ್ತದೆ. ಎಂಎಸ್ ಎಕ್ಸೆಲ್, ಆರ್ಸ್ಟುಡಿಯೋ, ಸಿ ಪ್ಲಸ್ ಪ್ಲಸ್, ಎಸ್ಕ್ಯೂಎಲ್, ಅರಾಕಲ್, ಸಿಲ್ಯಾಬ್, ಎಸ್ಪಿಎಸ್ಎಸ್ ಮತ್ತು ಎಸ್ಎಎಸ್ ವಿಷುವಲ್ ಅನಲೈಟಿಕ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
ಬ್ಯಾಚುಲರ್ ಆಫ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನಲ್ಲಿ ಥಿಯೆರಿಟಿಕಲ್ ಮತ್ತು ಇಂಟರ್ನ್ಶಿಪ್ ಇರುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಉದ್ಯಮವನ್ನು ಹೇಗೆ ನಡೆಸಬಹುದು ಎಂಬುದನ್ನು ಕಲಿಸಲಾಗುತ್ತದೆ. ಈ ಕೋರ್ಸ್ನಲ್ಲಿ ಅಕೌಂಟಿಂಗ್, ಮಾರ್ಕೆಟಿಂಗ್, ಅನಲೈಟಿಕ್ಸ್, ಲಾಜಿಸ್ಟಿಕ್ಸ್ ಮತ್ತು ಕಾನೂನು ಶಿಕ್ಷಣ ನೀಡಲಾಗುತ್ತದೆ. ಇನ್ನು ಮ್ಯಾಚುಲರ್ ಆಫ್ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ಕೋರ್ಸ್, ಸಿವಿಲ್ ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಇತರ ಸಂಬಂಧಿತ ಎಂಜಿನಿಯರಿಂಗ್ ಪ್ರೋಗ್ರಾಂಗಳ ಸರಳ ರೂಪ. ಆರ್ಥಿಕತೆ, ಅಕೌಂಟಿಂಗ್, ಲಾಜಿಸ್ಟಿಕ್, ಇನ್ವೆಂಟರಿ ನಿರ್ವಹಣೆ ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರದ ಹಲವಾರು ವಿಷಯಗಳ ಅಧ್ಯಯನ ಇದಾಗಿದೆ.
ಸೋಶಿಯಲ್ ಸೈನ್ಸ್
ಸೋಶಿಯಲ್ ಸೈನ್ಸ್ ಮತ್ತು ಹ್ಯುಮ್ಯಾನಿಟಿ ಕ್ಷೇತ್ರದಲ್ಲಿ ಹಲವಾರು ಕೋರ್ಸ್ಗಳಿವೆ. ಅವುಗಳ ಪೈಕಿ ಬ್ಯಾಚುಲರ್ ಆಫ್ ಸ್ಕ್ರೀನ್ ರೈಟಿಂಗ್, ಮ್ಯಾಚುಲರ್ ಆಫ್ ಆರ್ಟ್ಸ್ (ವಿಶುವಲ್ ಆರ್ಟ್ಸ್ ಮತ್ತು ಫೋಟೋಗ್ರಫಿ), ಬ್ಯಾಚುಲರ್ ಆಫ್ ಕಲಿನರಿ ಆರ್ಟ್ಸ್, ನ್ಯೂ ಏಜ್ ಫಿಲ್ಮ್ ಪ್ರೊಡಕ್ಷನ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮೊದಲಾದ ಕೋರ್ಸ್ಗಳಿವೆ.
ಇವು ಕೆಲವು ಕೋರ್ಸ್ಗಳ ಉದಾಹರಣೆಗಳಷ್ಟೇ. ನಿಮ್ಮ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಕೋರ್ಸ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಭವಿಷ್ಯ ಹೇಗಿರಬೇಕು ಎನ್ನುವುದನ್ನು ನಿರ್ಧರಿಸಲು ಇಂತಹ ಕೋರ್ಸ್ಗಳ ಆಯ್ಕೆಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ
ಚಾರ್ಟೆಡ್ ಅಕೌಂಟೆನ್ಸಿ (CA):
ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್ ಆಗುವತ್ತ ಗಮನಹರಿಸಬಹುದು . ಈ ಹುದ್ದೆಯಲ್ಲಿ ಹೆಚ್ಚಿನ ಸಂಬಳ ಪಡೆಯುವ ಅವಕಾಶವಿರುತ್ತದೆ. ಆದರೆ ಪರಿಶ್ರಮ ಕೂಡ ಇದಕ್ಕೆ ಅಗತ್ಯವಿದೆ. ಈ ಕೋರ್ಸ್ ಮಾಡಲು ಮೂರು ಹಂತದ ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
ಚಾರ್ಟೆಡ್ ಅಕೌಂಟೆಂಟ್ ಅತಿ ಹೆಚ್ಚು ಸಂಬಳ ಗಿಟ್ಟಿಸಿಕೊಳ್ಳುವಂತಹ ಒಂದು ಉದ್ಯೋಗ ಅಂತಾನೆ ಹೇಳಬಹುದು. ಚಾರ್ಟೆಡ್ ಅಕೌಂಟೆನ್ಸಿ (ಸಿಎ) ಕೋರ್ಸ್ ಅನ್ನು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಮಾಡಬಹುದು. ಸಿಎ ಕೋರ್ಸ್ ಮಾಡಲು ಮೂರು ಹಂತಗಳಿರುತ್ತವೆ ಅವುಗಳೆಂದರೆ
1. ಕಾಮನ್ ಪ್ರೊಫಿಷಿಯನ್ಸಿ ಟೆಸ್ಟ್ (ಸಿಪಿಟಿ)
2. ಇಂಟಿಗ್ರೇಟೆಡ್ ಪ್ರೊಫೆಷನಲ್ ಕಾಂಪಿಟೆನ್ಸ್ ಕೋರ್ಸ್ (ಐಪಿಸಿಸಿ)
3. ಫೈನಲ್ ಎಕ್ಸಾಮಿನೇಷನ್
ಈ ಮೂರು ಹಂತಗಳನ್ನು ಕಂಪ್ಲೀಟ್ ಮಾಡಿದ ನಂತರ ನೀವು ಚಾರ್ಟೆಡ್ ಅಕೌಂಟೆಂಟ್ ಆಗುತ್ತೀರಿ. ಈ ಕೋರ್ಸ್ ಮಾಡಲು ತುಂಬಾನೆ ತಾಳ್ಮೆ ಮತ್ತು ಹೆಚ್ಚು ಶ್ರಮ ಅಗತ್ಯ. ಆದರೆ ಒಂದು ಬಾರಿ ನೀವು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರೆ ಮುಗೀತು ಆರಂಭಿಕ ಹಂತದಲ್ಲೇ ಉತ್ತಮ ವೇತನವನ್ನು ಪಡೆಯಬಹುದು. ಉದಾಹರಣೆಗೆ ಚಾರ್ಟೆಡ್ ಅಕೌಂಟೆಂಟ್ ಆದರೆ ವರ್ಷಕ್ಕೆ 30 ರಿಂದ 35 ಲಕ್ಷದವರೆಗೂ ಸಂಬಳವನ್ನು ಪಡೆಯಬಹುದು.
ಲೈಬ್ರರಿ ಸೈನ್ಸ್( B.Lib) :
ಲೈಬ್ರರಿ ಸೈನ್ಸ್ ಪದವಿ ಒಂದು ವಿಭಿನ್ನವಾದದ್ದು. ಈ ಪದವಿಯನ್ನು ಇಂಥವರೇ ಮಾಡಬೇಕು ಎಂಬುವುದಿಲ್ಲ. ಇದನ್ನು ಮಾಡುವುದರಿಂದ ಸರ್ಕಾರಿ ಕಾಲೇಜುಗಳಲ್ಲಿ ಲೈಬ್ರರಿಯನ್ ಆಗಿ ಒಳ್ಳೆಯ ಕೆಲಸ ಸಿಗುವುದರ ಜೊತೆಗೆ ಒಳ್ಳೆಯ ಸಂಬಳ ಸಹ ಸಿಗುತ್ತದೆ. ಹಾಗೆಯೇ ಈ ಕೋರ್ಸ್ಗೆ ಹೆಚ್ಚು ಸ್ಕೋಪ್ ಸಹ ಇದೆ.
ಫ್ಯಾಷನ್ ಡಿಸೈನಿಂಗ್ :
ಕಲಾತ್ಮಕ ಕೆಲಸಗಳನ್ನು ಮಾಡುವ ಬಯಕೆ ಇದ್ದರೆ ನೀವು ಈ ಕೋರ್ಸ್ ಮಾಡಬಹುದು. ಫ್ಯಾಷನ್ ಡಿಸೈನಿಂಗ್ನಲ್ಲಿ ಡಿಪ್ಲೊಮೊ ಮಾಡಬಹುದು. ಇದರ ಜೊತೆ ಆಭರಣಗಳ ಡಿಸೈನಿಂಗ್ ಸಹ ಕಲಿಯಲು ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಜನರು ಡಿಸೈನರ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಿರುವುದರಿಂದ ಒಳ್ಳೆಯ ಕೆಲಸದ ಜೊತೆ ಸಂಬಳವೂ ಸಿಗುತ್ತದೆ. ಕ್ರಿಯಾಶೀಲ ಜಗತ್ತು ಇಲ್ಲಿ ಕಲೆಗೆ ಬೆಲೆ. ಈಗಿನ ಟ್ರೆಂಡ್ ಅನ್ನೋದೆ ಫ್ಯಾಷನ್ ಹಾಗಾಗಿ ಫ್ಯಾಷನ್ ಡಿಸೈನರ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಚಿಕ್ಕ ಮಕ್ಕಳಿಂದ ಹಿಡಿದೂ ವೃದ್ಧರ ವರೆಗೂ ಫ್ಯಾಷನ್ ಅನ್ನೋದೆ ಗುಂಗಾಗಿ ಬಿಟ್ಟಿದೆ ಹಾಗಾಗಿ ನೀವು ಒಮ್ಮೆ ಈ ಕೋರ್ಸ್ ಮಾಡಿ ನಂತರ ನಿಮ್ಮ ಶ್ರಮದಿಂದ ಒಮ್ಮೆ ಫೇಮಸ್ ಆದ್ರೆ ಸಾಕು ಕೈತುಂಬಾ ಕೆಲಸ ಮತ್ತು ಸಂಬಳ ನಿಮ್ಮ ಬಳಿಯೇ ಬರುತ್ತದೆ.
ಯಾವೆಲ್ಲಾ ಫ್ಯಾಷನ್ ಡಿಸೈನಿಂಗ್ ಕೋರ್ಸ್ಗಳಿವೆ:
* ಬಿ.ಡಿಇಎಸ್ (B.Des. ) ಫ್ಯಾಷನ್ ಡಿಸೈನ್
* ಬಿ.ಡಿಇಎಸ್ (B.Des. ) ಲೆಧರ್ ಡಿಸೈನ್
* ಬಿ.ಡಿಇಎಸ್ (B.Des. ) ಅಸ್ಸೆಸರಿ ಡಿಸೈನ್
* ಬಿ.ಡಿಇಎಸ್ (B.Des. ) ಫ್ಯಾಷನ್ ಕಮ್ಯುನಿಕೇಷನ್
ನ್ಯಾನೋ ಟೆಕ್ನಾಲಜಿ
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇನ್ನೊಂದು ಕ್ಷೇತ್ರವೆಂದರೆ ಅದು ನ್ಯಾನೋ ತಂತ್ರಜ್ಞಾನ. ವೈದ್ಯಕೀಯ, ರಾಸಾಯನಿಕ, ಕೃಷಿ, ಮುಂತಾದ ಕ್ಷೇತ್ರಗಳಲ್ಲಿ ಯಥೇಚ್ಛವಾದ ಉದ್ಯೋಗವಕಾಶಗಳು ಈ ನ್ಯಾನೋ ತಂತ್ರಜ್ಞಾನದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ.
ಸ್ಟೆಮ್ ಸೆಲ್ ಮತ್ತು ಟಿಶ್ಯೂ ಇಂಜಿನೀಯರಿಂಗ್
ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೆಯೇ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿರುವ ದೊಡ್ಡ ಕ್ಷೇತ್ರ ಇದಾಗಿದೆ. ಇದರಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯುವ ವಿಪುಲ ಅವಕಾಶವಿದೆ. ಈ ಪದವಿಗೆ ಪಿಯು ಹಂತದಲ್ಲಿ ಜೀವಶಾಸ್ತ್ರವನ್ನು ಅಧ್ಯಯನ ಮಾಡಿರಬೇಕು
ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಅಂಡ್ ಶೀನ್ ಲರ್ನಿಂಗ್
ಎಐ ಅಂಡ್ ಎಂ ಎಲ್ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡಲಾಗುತ್ತಿರುವ ಈ ಪದವಿಯು ಇತ್ತೀಚೆಗೆ ವಿಪುಲವಾದ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿದೆ. ರೋಬೋಟ್ ತಂತ್ರಜ್ಞಾನದಿಂದ ಹಿಡಿದು ಕೃಷಿಯವರೆಗೆ ಇದರ ಉಪಯೋಗವಿದೆ.
ಡೇಟಾ ಸೈನ್ಸ್
ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ ಪದವಿ ಇದು. ಸಾಮಾನ್ಯವಾಗಿ ಉದ್ಯಮಗಳಲ್ಲಿ ಡೇಟಾ ಸೈಂಟಿಸ್ಟ್ ಎಂಬ ಅತ್ಯಂತ ಉಪಯುಕ್ತವಾದ ಹುದ್ದೆಗಳು ಸೃಷ್ಟಿಯಾಗುತ್ತಿದ್ದು, ವಿಪುಲವಾದ ಔದ್ಯೋಗಿಕ ಅವಕಾಶಗಳನ್ನು ನೀಡುತ್ತಿದೆ.
ಸಾಂಪ್ರದಾಯಿಕವಾದ ಸ್ಟಾಟಿಸ್ಟಿಕ್ಸ್ ಎಂಬ ವಿಷಯವನ್ನೇ ಆಧಾರವಾಗಿಟ್ಟುಕೊಂಡು, ಅದರ ಬಳಕೆಯ ಮೇಲೆ ಹೆಚ್ಚು ಮಹತ್ವವನ್ನು ನೀಡುವ ವಿಶಿಷ್ಟವಾದ ಪದವಿ ಇದಾಗಿದೆ. ಪದವಿ ಕೋರ್ಸುಗಳಷ್ಟೇ ಅಲ್ಲದೆ, ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ ಪದವಿಯನ್ನು ಪಡೆಯಲೂ ಅವಕಾಶವಿದೆ. ಪಿ ಹೆಚ್ಡಿ ಅಧ್ಯಯನವನ್ನು ಕೂಡಾ ಮಾಡಬಹುದು. ಬಿಗ್ ಡೇಟಾ ಅನಾಲಿಸಿಸ್ ಎಂಬ ಹೆಸರಿನಲ್ಲಿಯೂ ಕೆಲವು ಕೋರ್ಸುಗಳನ್ನು ತೆಗೆದುಕೊಳ್ಳಬಹುದು..
ಮೇಲೆ ಹೇಳಿದ ವಿವಿಧ ರೀತಿಯ ಪದವಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯತ್ ನ್ನು ರೂಪಿಸಲು ಸಹಾಯ ಮಾಡುತ್ತವೆ,ಅದರೆ ತಮ್ಮ ಮನಸ್ಥಿತಿ, ಕೌಶಲ್ಯಕ್ಕೆ ಆಯ್ಕೆ ಮಾಡಿದರೆ ಅತ್ಯುತ್ತಮವಾಗಿರುತ್ತದೆ.