ಬೆಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವ್ ಹಿನ್ನೆಲೆಯಲ್ಲಿ ಶ್ರೀ ಅರಬಿಂದೋ ಘೋಷ್ ಅವರ 150 ನೇ ಜನ್ಮೋತ್ಸವದ ಸ್ಮರಣಾರ್ಥ ಶ್ರೀ ಎಂ ಅವರ ಮಾರ್ಗದರ್ಶನದ ಸತ್ಸಂಗ ಪ್ರತಿಷ್ಠಾನವು ಮಾನವ್ ಸೇವಾ – ಬಿಯಾಂಡ್ ಬ್ಯಾರಿಯರ್ಸ್’ (ಮಾನವ ಸೇವೆ; ಅಡೆತಡೆಗಳನ್ನು ಮೀರಿ) ಎಂಬ ಯೋಜನೆ ಹಮ್ಮಿಕೊಂಡಿತು.
ಇದು ನಗರಗಳಾದ್ಯಂತ ಜೈಲು ಕೈದಿಗಳಿಗೆ ನೆರವಿನಹಸ್ತವನ್ನು ನೀಡುವ ಕಾರ್ಯಕ್ರಮವಾಗಿದೆ.
ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಟ್ರೈನ್ ದಿ ಟ್ರೈನರ್ ಎಂಬ ಯೋಗಾಭ್ಯಾಸದ ತರಬೇತಿ ಕಾರ್ಯಕ್ರಮವನ್ನು ಸತ್ಸಂಗ್ ಫೌಂಡೇಶನ್ನಿನ 14 ಸ್ವಯಂಸೇವಕರ ತಂಡ ಕೈಗೊಂಡಿತ್ತು.
ಒಟ್ಟು 120 ಕೈದಿಗಳಿಗೆ 1020 ಗಂಟೆಗಳಷ್ಟು ತರಬೇತಿಯನ್ನು ನೀಡಲಾಗಿತ್ತು.
24 ರಿಂದ 40 ಕೈದಿಗಳ 4 ಬ್ಯಾಚ್‌ಗಳಿಗೆ ಒಂದೂವರೆ ಗಂಟೆ ಕಾಲ 5 ರಿಂದ 6 ಯೋಗ ತರಗತಿಗಳನ್ನು ನಡೆಸಿ ತರಬೇತಿ ಕೊಡಲಾಯಿತು.
ಅಲ್ಲದೇ ಭಾಗವಹಿಸಿದವರಿಗೆ ಅಂತರಾಷ್ಟ್ರೀಯ ಯೋಗ ದಿನದಂದು ಪ್ರಮಾಣಪತ್ರವನ್ನೂ ನೀಡಲಾಯಿತು.
ಪ್ರತಿ ಬ್ಯಾಚ್‌ನಲ್ಲಿ 8 ರಿಂದ 10 ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಯೋಗವನ್ನು ಪ್ರದರ್ಶಿಸಿದರು.
ಬೆಂಗಳೂರು ಕಾರ್ಯಕ್ರಮವನ್ನು ಈ ಹಿಂದೆ ಮೇ 7 ರಂದು ಯೋಗ ಪ್ರದರ್ಶನದೊಂದಿಗೆ ಉದ್ಘಾಟಿಸಲಾಗಿತ್ತು. ಈ ಕಾರ್ಯಕ್ರಮದಿಂದ ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವು ಸುಧಾರಿಸುವುದಷ್ಟೇ ಅಲ್ಲ; ಅವರು ಆಂತರಿಕವಾಗಿಯೂ ಸುದೃಢಗೊಳ್ಳಲು ಸಾಧ್ಯವಾಗುತ್ತದೆ. ಕೈದಿಗಳ ಬಿಡುಗಡೆಯ ನಂತರವೂ ಯೋಗದ ತರಬೇತುದಾರರಾಗಿ ಉದ್ಯೋಗವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತರಬೇತಿಯು ಅವರಿಗೆ ಸಹಾಯ ಮಾಡಬಲ್ಲದು. ಮುಂದಿನ ಕಾರ್ಯಕ್ರಮಗಳು ಚರ್ಚೆಯಲ್ಲಿವೆ.
ತರಬೇತಿ ಪಡೆದವರು ಯೋಗದಿಂದ ತಮ್ಮ ಮನಸ್ಸಿಗೆ ದೊರೆತ ಶಾಂತಿಯ ಕುರಿತು ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಹುರುಪಿನಿಂದ ಪಾಲ್ಗೊಂಡ ಕೈದಿಗಳೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸಾರ್ಥಕ ಭಾವವನ್ನು ಅನುಭವಿಸುವ ಅವಕಾಶವು ಸ್ವಯಂಸೇವಕರಿಗೆ ದೊರೆತಂತಾಯಿತು.