ಮೈಸೂರು: ಬೇರೆಯವರೊಂದಿಗೆ ವಿವಾಹವಾಗಿದ್ದರೂ ಪ್ರೀತಿಯ ಬಲೆಗೆ ಬಿದ್ದ ಪ್ರೇಮಿಗಳು ನಿಗೂಢವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕು ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.
ಎಂ.ಕೆಬ್ಬೆಹುಂಡಿ ಗ್ರಾಮದ ರವಿಶಂಕರ್ ಪತ್ನಿ ಸುಮಿತ್ರಾ ಹಾಗೂ ಅದೇ ಗ್ರಾಮದ ಸಿದ್ದರಾಜು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಸಿದ್ದರಾಜು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಸುಮಿತ್ರಾ ದೇಹ ಸಮೀಪದಲ್ಲೇ ಮರಳುಗುಡ್ಡೆ ಯಲ್ಲಿ ಮುಚ್ಚಿದ ರೀತಿಯಲ್ಲಿ ಕಂಡು ಬಂದಿದೆ.
ಸುಮಿತ್ರಾಗೆ ವಿವಾಹವಾಗಿದ್ದರೂ ಸಿದ್ದರಾಜು ಪ್ರೀತಿಸುತ್ತಿದ್ದಳು. ಹಲವು ವರ್ಷಗಳಿಂದ ಅಕ್ರಮ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದೆ.
ಶನಿವಾರ ಸಿದ್ದರಾಜು ಸುಮಿತ್ರಾ ಜೊತೆಗೆ ತಲಕಾಡಿಗೆ ತೆರಳಿದ್ದ. ಅದೇನಾಯಿತೊ ಕಾವೇರಿ ನಿಸರ್ಗಧಾಮದಲ್ಲಿ ಇವರಿಬ್ಬರ ಮೃತದೇಹ ಪತ್ತೆಯಾಗಿದೆ.
ಈ ಹಿಂದೆಯೂ ಅನೇಕ ಬಾರಿ ಸಿದ್ದರಾಜು ಆತ್ಮಹತ್ಯೆಗೆ ಯತ್ನಿಸಿದ್ದನಂತೆ.
ಸಾಯುವ ಮುನ್ನ ಕೊನೆಯದಾಗಿ ತಮ್ಮದೇ ಗ್ರಾಮದ ನಿಂಗರಾಜು ಎಂಬಾತನಿಗೆ ವಾಟ್ಸಾಪ್ ಮೂಲಕ ಸುಮಿತ್ರಾ ಸತ್ತಿದ್ದಾಳೆ. ನಾನೂ ಕೂಡ ಸಾಯುತ್ತೇನೆ ಎಂಬ ವಾಯ್ಸ್ ಮೆಸೇಜ್ ಕಳಿಸಿದ್ದ ಎಂದು ಗೊತ್ತಾಗಿದೆ.
ವಾಯ್ಸ್ ಮೇಸೇಜ್ ನಲ್ಲಿ ಸುಮಿತ್ರಾ ನನ್ನನ್ನು ಕುಡಿಯಲು ನೀರು ತರಲೆಂದು ಕಳಿಸಿ ನಾನು ಬರುವಷ್ಟರಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳು ನನಗೋಸ್ಕರ ಪ್ರಾಣ ಬಿಟ್ಟಿದ್ದಾಳೆ.
ಹಾಗಾಗಿ ಬೇಸತ್ತು ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆಂದು ನಿಂಗರಾಜು ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ತಲಕಾಡು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.