ಯಾರ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ -ಎಚ್ ಡಿ ಕೆ

ರಾಮನಗರ: ಕಾಂಗ್ರೆಸ್ ಬಗ್ಗೆ ಆಗಲಿ ಅಥವಾ ರಾಹುಲ್ ಗಾಂಧಿಯವರ ಬಗ್ಗೆ ಆಗಲಿ ನನಗೆ ಸಾಫ್ಟ್ ಕಾರ್ನರ್ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ನಾನು ಇದ್ದ ವಿಷಯವನ್ನೇ ಹೇಳಿದ್ದೇನೆ. ಕಾಂಗ್ರೆಸ್ ನಾಯಕರ ರೀತಿ ಬೀದಿಯಲ್ಲಿ ಬ್ಯಾರಿಕೇಡ್ ಹತ್ತಿ ಡಾನ್ಸ್ ಮಾಡುವುದಕ್ಕೆ ಹೋಗಬೇಕೇ ಎಂದು ಪ್ರಶ್ನಿಸಿದರು.

ಚನ್ನಪಟ್ಟಣದಲ್ಲಿ ಮಾಧ್ಯಮ‌ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ವಾಸ್ತವಾಂಶ ಹೇಳಿದ್ದೇನೆ. ಯಾರ ಜತೆ ರಾಜಿಯಾಗಲಿ ಅಥವಾ ಅನುಕಂಪದ ಪ್ರಶ್ನೆ ಇಲ್ಲ ಎಂದು ಹೇಳಿದರು

ಈ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸ್ವಾಯುತ್ತ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬುದನ್ನು ಚರ್ಚೆ ಮಾಡಿದ್ದೇನೆ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರನ್ನು ಒಲೈಸಿಕೊಳ್ಳಲು ನಾನು ಹೇಳಿಲ್ಲ ಎಂದು ತಿಳಿಸಿದರು.

ನಾನು ಈ ಹೇಳಿಕೆ ಕೊಟ್ಟಾಗ ಒಬ್ಬ ಬಿಜೆಪಿ ಸಂಸದರೇ ನನಗೆ ಪೋನ್ ಮಾಡಿ ಶಹಬ್ಬಾಸ್ ಗಿರಿ ಹೇಳಿದರು. ಈ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾತನಾಡಿದ್ದೀರಿ ಎಂದರು.

ನಮ್ಮ ಕುತ್ತಿಗೆ ಕುಯ್ದಿದ್ದೇ ಕಾಂಗ್ರೆಸ್ ನವರು. ನಾನು ಯಾಕೆ ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಲಿ. ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಆಗುವ ಪ್ರಶ್ನೇಯೆ ಇಲ್ಲ ಎಂದು ಕುಮಾರಸ್ವಾಮಿ  ಸ್ಪಷ್ಟಪಡಿಸಿದರು.

ಇದು ಬಿಜೆಪಿಯದ್ದೇ ಆಟ:
ಮಹಾರಾಷ್ಟ್ರದಲ್ಲಿ ಸರ್ಕಾರ ತೆಗೆಯಲು ಬಿಜೆಪಿ ಹೊರಟಿದೆ. ತಮಗೆ ಏನೂ ಗೊತ್ತಿಲ್ಲ ಎಂಬಂತೆ ಬಿಜೆಪಿಯವರು ಇದ್ದಾರೆ. ಆದರೆ ಇಡೀ ದೇಶಕ್ಕೆ ಇದು ಬಿಜೆಪಿಯ ಆಟವೆಂದು ಗೊತ್ತು ಎಂದು ಇದೇ ವೇಳೆ ಎಚ್ ಡಿಕೆ ಹೇಳಿದರು.

ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಶಾಸಕರನ್ನು ಹೈಜಾಕ್ ಮಾಡಿಕೊಂಡು ಹೋಗಿ ಅಲ್ಲಿಟ್ಟುಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಶಾಸಕರನ್ನು ಮುಂಬೈಗೆ ಕರೆದೊಯ್ದಿದ್ದರು.

ಕರ್ನಾಟಕದಲ್ಲಿ ನನ್ನ ಸರ್ಕಾರವನ್ನು ತೆಗೆದಂತೆ ಅಲ್ಲಿನ ಸರ್ಕಾರವನ್ನು ಕೊಡ ತೆಗೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.