ಯೂಟ್ಯೂಬ್ ನ್ಯೂಸ್ ಚಾನೆಲ್ ನ ಐದು ಮಂದಿ ಕಂಬಿ ಹಿಂದೆ

ಮೈಸೂರು: ವ್ಯಕ್ತಿಯೊಬ್ಬರಿಗೆ  ಬ್ಲಾಕ್‌ ಮೇಲ್ ಮಾಡಿ ಹಣ ನೀಡುವಂತೆ ಪೀಡಿಸುತ್ತಿದ್ದ  ಯೂಟ್ಯೂಬ್ ನ್ಯೂಸ್ ಚಾನೆಲೊಂದರ ಐದು ಮಂದಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮೈಸೂರನಲ್ಲಿ ನಡೆದಿದೆ.

ಕರ್ನಾಟಕ ಪಬ್ಲಿಕ್ ವಾಯ್ಸ್ ನ್ಯೂಸ್ ಚಾನಲ್ (ಕೆಪಿವಿ ನ್ಯೂಸ್ )ನ ಅಭಿಲಾಷ್, ಮಣಿ, ಪ್ರದೀಪ್, ಬಸವರಾಜು, ನವೀನ್‌ ಕುಮಾರ್ ಬಂಧಿತರು.

ಈ ಆರೋಪಿಗಳು ಇಂಡಿಕಾ ಕಾರಿನಲ್ಲಿ ಜೂನ್ 25ರಂದು ಮಧ್ಯಾಹ್ನ ಅಶೋಕ ರಸ್ತೆಯಲ್ಲಿರುವ ಉಮರ್ ಷರೀಫ್ ಎಂಬವರ ಮನೆಗೆ ಬಂದಿದ್ದಾರೆ

ಕ್ಯಾಮರಾ ತೆಗೆದು ಚಿತ್ರೀಕರಣಕ್ಕೆ ಪ್ರಯತ್ನಿಸಿದಾಗ ಪರೀಫ್‌ ವಿರೋಧಿಸಿದ್ದಾರೆ.

ಆ ವೇಳೆ ನಿಮ್ಮ ಮನೆಯಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದೀರಾ ನಾವು ಅದನ್ನು ಟಿವಿಯಲ್ಲಿ ಹಾಕುತ್ತೇವೆ ಎಂದು ಆರೋಪಿಗಳು ಬೆದರಿಸಿದ್ದಾರೆ.

ಅದೇ ವೇಳೆ ಗುಂಪಿನಲ್ಲಿದ್ದ ಒಬ್ಬ ತಾನು ಬೆಂಗಳೂರಿನಿಂದ ಬಂದಿರುವ ಕ್ರೈಂ ಪೊಲೀಸ್ ಎಂದು ಹೇಳಿ ಷರೀಫ್ ಮನೆಯಲ್ಲಿ ಕೂಗಾಡಿದ್ದಾನೆ.

ಈ ವೇಳೆ ಸ್ಥಳೀಯರು ಗುಂಪುಗೂಡಿದ್ದಾರೆ. ಮಾಜಿ ಕಾರ್ಪೊರೇಟರ್ ಸುಹೇಲ್ ಬೇಗ್ ಕೂಡ ಸ್ಥಳಕ್ಕೆ ಆಗಮಿಸಿ ಕ್ರೈಂ ಪೊಲೀಸ್ ಎಂದು ಹೇಳಿದ ವ್ಯಕ್ತಿಯೊಂದಿಗೆ ಈ ಮನೆಯಲ್ಲಿ ಯಾವುದೇ ಗ್ಯಾಸ್ ರೀ-ಫಿಲ್ಲಿಂಗ್ ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಒಂದು ವೇಳೆ ನೀವು ರೈಡ್ ಮಾಡಲೇಬೇಕಾದರೆ ಮಂಡಿ ಠಾಣೆ ಪೊಲೀಸರನ್ನು ಕರೆಸಿಕೊಳ್ಳಿ. ಇದು ಸೆನ್ಸಿಟಿವ್ ಏರಿಯಾ. ಸ್ಥಳೀಯ ಪೊಲೀಸರು ಇಲ್ಲದಿದ್ದರೆ ತೊಂದರೆಯಾಗಬಹುದು ಎಂದು ಹೇಳಿದ್ದಾರೆ.

ಈ ವೇಳೆ ಆತ ಲೋಕಲ್ ಪೊಲೀಸ್ ಎಲ್ಲಾ ಯಾಕೆ ನಮಗೆ ಏನಾದರೂ ಕೊಡಿಸಿಬಿಡಿ ಎಂದು ಹೇಳುತ್ತಿದ್ದಂತೆಯೇ ಸುಹೇಲ್ ಬೇಗ್ ಅವರಿಗೆ ಈತ ನಕಲಿ ಪೊಲೀಸ್ ಎಂಬುದು ಮನವರಿಕೆಯಾಗಿದೆ.

ತಕ್ಷಣವೇ ಮಂಡಿ ಠಾಣೆಗೆ ಕರೆ ಮಾಡಿದ್ದಾರೆ.  ಐದು ಮಂದಿ ಹಾಗೂ ಕಾರನ್ನು ವಶಪಡಿಸಿಕೊಂಡ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಂತರ ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.