ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಐದು ವಿದ್ಯಾರ್ಥಿಗಳು

ಮೈಸೂರು: ಅಪ್ರಾಪ್ತ ಬಾಲಕನೊಬ್ಬನ ಮೇಲೆ ಅಪ್ರಾಪ್ತ ಬಾಲಕರೇ ಲೈಂಗಿಕ ಕಿರುಕುಳ ನೀಡಿ ಆ ದೃಶ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿರುವ ಹೇಯ ಘಟನೆ ನಂಜನಗೂಡು ತಾಲೂಕಿನಲ್ಲಿ ನಢೆದಿದೆ.

ಇಂತಹ ಹೇಯ ಘಟನೆ ವೀರದೇವನಪುರ ಗ್ರಾಮದಲ್ಲಿ ನಡೆದಿದ್ದು,ಈ ಸಂಬಂಧ ಐವರು  ಬಾಲಕರನ್ನು ಬಿಳಿಗೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದೇ ಗ್ರಾಮದ ಎಂಟನೇ ತರಗತಿಯ ಬಾಲಕನನ್ನು ಎಂಟು ಮತ್ತು ಹತ್ತನೇ ತರಗತಿಯ ಇಬ್ಬರು ಬಾಲಕರು ಕ್ರಿಕೆಟ್ ಆಡಲೆಂದು ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಕಳೆದ ಜೂ. 18ರಂದು ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ.

ಈ ದೃಶ್ಯವನ್ನು ಮತ್ತೊಬ್ಬ ಬಾಲಕ ಚಿತ್ರೀಕರಿಸಿದ್ದಾನೆ.

ಈ ಪ್ರಕರಣದಲ್ಲಿ ಒಟ್ಟು ಐವರು ಅಪ್ರಾಪ್ತ ಬಾಲಕರು ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ನಡೆದ ನಂತರ ಬಾಲಕ ಶಾಲೆಗೂ ಹೋಗದೆ ಸರಿಯಾಗಿ ಊಟವನ್ನೂ ಮಾಡದೆ ಮಂಕಾಗಿ ಇರುತ್ತಿದ್ದ.

ಪೋಷಕರು ಎಷ್ಟು ಕೇಳಿದರೂ ಉತ್ತರಿಸದೇ ಬಾಲಕ ಮೌನವಾಗಿರುತ್ತಿದ್ದ.

ಈ ನಡುವೆ ಬಾಲಕನ ಅಣ್ಣ ತನ್ನ ಸ್ನೇಹಿತನಿಗೆ ತಮ್ಮನ ಮನಸ್ಥಿತಿಯ ಬಗ್ಗೆ ಹೇಳಿಕೊಂಡಾಗ  ಲೈಂಗಿಕ ದೌರ್ಜನ್ಯ ನಡೆದಿದ್ದು ಅದರ ವಿಡಿಯೋ ವೈರಲ್ ಆಗಿರುವ ಕುರಿತು ಬಾಲಕನ ಅಣ್ಣನಿಗೆ ಆತ ತಿಳಿಸಿದ್ದಾನೆ.

ನಂತರ ಬಾಲಕನ ಪೋಷಕರು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ನಂಜನಗೂಡು ಪಟ್ಟಣ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ ನೇತೃತ್ವದ ಸಿಬ್ಬಂದಿ ಐದು ಮಂದಿ ಬಾಲಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದಾದನಂತರ ಬಾಲಾಪರಾಧಿಗಳನ್ನು ಬಾಲಮಂದಿರಕ್ಕೆ ರವಾನಿಸಲಾಗಿದೆ.