ಕಾಂಗ್ರೆಸ್, ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದಿನ ನಡೆ ಮೇಲೆ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಅವಲಂಬಿತವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪನವರು ಬೇರೆ ಪಕ್ಷ ಕಟ್ಟಿದ್ದ ದಿನದ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕರು ಹಾಕಿದ್ದಾರೆ ಎಂದು ಹೇಳಿದರು.

ಪತ್ರಿಕೆಯೊಂದರಲ್ಲಿ ಬಂದಿರುವ ಆಂತರಿಕ ವರದಿ ನೋಡಿದ್ದೇನೆ. ಆ ವರದಿಯಲ್ಲಿ ಮೂರು ರೀತಿಯ ಪ್ರತಿಕ್ರಿಯೆ ಇದೆ. ಕಾಂಗ್ರೆಸ್ ನಾಯಕರ ಪರಿಸ್ಥತಿ ಏನಿದೆ ಎಂಬುದು ಗೊತ್ತಿದೆ ಎಂದರು.

ಒಂದು ಸ್ಥಾನ ಇಲ್ಲದೇ ಇದ್ದಾಗಲೂ ನಾವು ಗೆದ್ದಿದ್ದೇವೆ. ವಿಧಾನ ಪರಿಷತ್ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ.

ಅವರು ಆಂತರಿಕ ಸಮೀಕ್ಷೆ ಮಾಡಲಿ. ನಮಗೆ ಯಾವುದೇ ಆತಂಕ ಇಲ್ಲ. ನಾವು ನಮ್ಮ ಗುರಿ ಮುಟ್ಟುತ್ತೇವೆ. ಕಾಂಗ್ರೆಸ್ ನವರ ಆಂತರಿಕ ಸಮೀಕ್ಷೆ ಬಗ್ಗೆ ಮಾತನಾಡಲ್ಲ ಎಂದು ‌ಹೇಳಿದರು.

ಅವರ ಒಳ ಒಪ್ಪಂದ ರಾಜ್ಯಸಭೆಯಲ್ಲಿ ಆಯ್ತು. ಬಿ ಟೀಂ ಅನ್ನುವುದು ಯಾರು ಅಂತ ಗೊತ್ತಾಗಿದೆ ಎಂದು ಟೀಕಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರ ಹಿಡಿಯಬೇಕೆಂದು ದೊಡ್ಡ ದೊಡ್ಡ ಸರ್ವೇ ಮಾಡುವ ಕಂಪನಿ ಜೊತೆ ಸೇರಿ ತಿರುಚುವ ಕೆಲಸ ಮಾಡುತ್ತಿವೆ ಎಂದು ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಬಗ್ಗೆ ಮಾಧ್ಯಮಗಳೇ ಹೇಳುತ್ತಿವೆ. ನಮಗೆ ಯಾವುದೇ ಆತಂಕ ಇಲ್ಲ. ನಮ್ಮ ಗುರಿ‌ಮುಟ್ಟಲೇ ಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನತೆ ವಿಶ್ವಾಸದಲ್ಲಿ ಸ್ವತಂತ್ರ ಸರ್ಕಾರ ತರಬೇಕೆಂದು ಹೊರಟಿದ್ದೇವೆ ಎಂದು ಹೇಳಿದರು.

ಜೆಡಿಎಸ್ ಶಾಸಕರು ಸಿದ್ದರಾಮಯ್ಯ ಅವರ ಸಂಪರ್ಕದಲ್ಲಿದ್ದಾರಂತಲ್ಲಾ ಎಂಬ ಪ್ರಶ್ನೆಗೆ  ಕೆಲವರು ಅವರ ವಿಶ್ವಾಸದಲ್ಲಿ ಇರಬಹುದು. ಆದರೆ ಅವರಲ್ಲೇ ಗೊಂದಲ ಇದೆ. ಆಷಾಢ ಮಾಸದ ನಂತರ ಅದು ಹೊರ ಬರುತ್ತದೆ ಎಂದು ಉತ್ತರಿಸಿದರು.

ಎಸಿಬಿ ಗೆ ಕೋರ್ಟ್ ಚಾಟಿ ಬೀಸಿದ  ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ಕೆ,ನಮ್ಮ ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿಯಿಂದ  ದಾಳಿ ನಡೆದರೆ ಪ್ರಯೋಜನವಿಲ್ಲ. ಸಾವಿರಾರು ದಾಳಿ ಆಗಿದೆ. ಎಷ್ಟು ಜನರ ಮೇಲೆ ಕ್ರಮ ಆಗಿದೆ ಹೇಳಿ ಎಂದು ಪ್ರಶ್ನಿಸಿದರು.

ರಾಜ್ಯದ ಗೌರವಾನ್ವಿತ ನ್ಯಾಯಾಲಯವೇ ಎಸಿಬಿ ಮುಖ್ಯಸ್ಥರೇ ಭ್ರಷ್ಟರು ಅಂತ ಹೇಳಿದೆ ಇದಕ್ಕಿಂತ ನಾಚಿಕೆಪಡುವ ಪ್ರಸಂಗ ಮತ್ತೊಂದಿಲ್ಲ ಎಂದು ಕಿಡಿಕಾರಿದರು.