(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೆಂದು ಹೇಳಿ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ ವ್ಯಕ್ತಿಯ ವಿರುದ್ಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರದಾನಿ ಕಚೇರಿ ಅದಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ಬಿಳಿಗಿರಿರಂಗನಬೆಟ್ಟದಲ್ಲಿ ದೇವರ ದರ್ಶನ, ಬಿಆರ್‌ಟಿಯಲ್ಲಿ ಸಂಪಿಗೆ ಮರ ವೀಕ್ಷಣೆ ಹಾಗೂ ವಾಸ್ತವ್ಯಕ್ಕೆ ಜಂಗಲ್ ಲಾಡ್ಜಸ್ ನಲ್ಲಿ ಕೊಠಡಿಗಳ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾದಿಕಾರಿಗೆ ಬೇಡಿಕೆ ಇಟ್ಟಿದ್ದ.
ನಾನು ಗುಜರಾತ್ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿದ್ದು, ಈಗ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ರಾವ್ ಎಂಬ ವ್ಯಕ್ತಿ ಜಿಲ್ಲಾಧಿಕಾರಿ ಅವರಿಗೆ ಜೂನ್ 27ರಂದು ಕರೆ ಮಾಡಿದ್ದರು.
ಕುಟುಂಬ ಸಮೇತರಾಗಿ ಜುಲೈ 2ರಂದು ಬಿಳಿಗಿರಿರಂಗನಬೆಟ್ಟಕ್ಕೆ ಬರುವುದಾಗಿ ತಿಳಿಸಿದ್ದರು.
ಪೂರ್ಣ ಹೆಸರು ಹಾಗೂ ಹುದ್ದೆಯ ವಿವರಗಳನ್ನು ಜಿಲ್ಲಾಧಿಕಾರಿ ಕೇಳಿದಾಗ ಗೌಪ್ಯತೆಯ ಕಾರಣಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ವ್ಯಕ್ತಿಯ ಮಾತಿನ ಶೈಲಿ ಬಗ್ಗೆ ಅನುಮಾನಗೊಂಡ ಜಿಲ್ಲಾಧಿಕಾರಿ ಆತನ ಮೊಬೈಲ್ ವಿವರಗಳನ್ನು ಪರಿಶೀಲಿಸಿದಾಗ ಆತ ಹೇಳಿದ್ದು ಸುಳ್ಳು ಎಂಬುದು ಗೊತ್ತಾಗಿದೆ.
ಪ್ರಧಾನಿ ಕಚೇರಿಯ ಹೆಸರು ದುರ್ಬಳಕೆ ಮಾಡಿಕೊಂಡು ಮೋಸ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾದಿಕಾರಿಯವರು ಪಟ್ಟಣ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ವಿವರಗಳನ್ನು ಕಲೆ ಹಾಕುತ್ತಿದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.