ಎಸ್ ಬಿ ಐ ನಿಂದ ಹಣ ಸಾಗಿಸುವ ನೆಪದಲ್ಲಿ 6 ಲಕ್ಷ ಕದ್ದ ಗುತ್ತಿಗೆ ಕಂಪನಿ ನೌಕರ

ಮೈಸೂರು: ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಗುತ್ತಿಗೆ ಕಂಪನಿಯೊಂದರ ನೌಕರ 6ಲಕ್ಷರೂ. ಕಳುವು ಮಾಡಿದ್ದಾನೆ.
ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಎಸ್ ಬಿಐ ನಲ್ಲಿ ಈ ಕಳ್ಳತನ ನಡೆದಿದೆ
ಬ್ಯಾಂಕ್ ಗೆ ಪಾವತಿಯಾಗುವ ನೋಟುಗಳಲ್ಲಿ ಬಳಕೆಗೆ ಯೋಗ್ಯವಲ್ಲದ ನೋಟ್ ಗಳನ್ನು ನಾಶಪಡಿಸುವ ಸಲುವಾಗಿ ಆರ್ ಬಿ ಐ ಗೆ ರವಾನಿಸಲಾಗುತ್ತದೆ.
ಈ ನೋಟುಗಳನ್ನು ವಿಂಗಡಿಸಿ ಆರ್ ಬಿಐ ಗೆ ರವಾನಿಸಲು ದೆಹಲಿ ಮೂಲದ ಮೆಸರ್ಸ್  ಜಿಸೆಕ್ ಮತ್ತು ದೆವ್ರಿಂಟ್ ಇಂಡಿಯಾ ಪ್ರೈ.ಲಿ.ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.
ಇದರ ಶಾಖಾ ಕಛೇರಿ ಬೆಂಗಳೂರಿನಲ್ಲಿದೆ. ಈ ಸಂಸ್ಥೆಯಿಂದ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಎಸ್ ಬಿ ಐ ನಿಂದ ಸಾಯಿಲ್ಡ್ ನೋಟುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಕೆ.ಕೆ.ನಾಗೇಂದ್ರ ಎಂಬಾತ 6,01,100ರೂ.ಗಳನ್ನು ಕಳುವು ಮಾಡಿದ್ದಾನೆ.
ಎಸ್ ಬಿ ಐ ನಿಂದ ಆರ್ ಬಿ ಐ ಗೆ ರವಾನೆಯಾದ ನೋಟುಗಳಲ್ಲಿ ಕಡಿಮೆ ಇದೆ ಎಂದು ಪತ್ರ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್ ನ ಕಟಿಂಗ್ ರೂಂಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಈ ಕೃತ್ಯ‌ ಬೆಳಕಿಗೆ ಬಂದಿದೆ.
ಗುತ್ತಿಗೆ ಸಂಸ್ಥೆಯಿಂದ ಹಣ ವಿಂಗಡಣೆ ಮಾಡಲು ನೇಮಕವಾಗಿದ್ದ ನಾಗೇಂದ್ರ ಎಂಬಾತ ಹಣದ ಕಟ್ಟುಗಳಲ್ಲಿರುವ ಕೆಲವು ನೋಟುಗಳನ್ನು ಕಳುವು ಮಾಡಿ ಜೇಬಿಗೆ ಹಾಕಿಕೊಳ್ಳುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. 
ಆತನ ವಿರುದ್ಧ ಮೈಸೂರಿನ ಇರ್ವಿನ್ ರಸ್ತೆಯಲ್ಲಿನ ಎಸ್ ಬಿಐ ನ  ಸರ್ಕಾರಿ ವ್ಯವಹಾರಗಳ ಶಾಖೆಯ ಮ್ಯಾನೇಜರ್ ಟಿ.ರಾಜೇಶ್ ದೂರು ನೀಡಿದ್ದು, ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.