ತುಮಕೂರು: ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಿದರು.
ರೌಡಿ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವ ಉದ್ದೇಶದಿಂದ ರೌಡಿಶೀಟರ್ ಗಳ ಮನೆ ಬಾಗಿಲನ್ನು ಪೊಲೀಸರು ಬಡಿದು ಅವರುಗಳನ್ನು ಎಬ್ಬಿಸಿ ಠಾಣೆಗೆ ಕರೆತಂದಿದ್ದಾರೆ.
ಜಯಪುರ, ಕೋತಿತೋಪು, ಬೆಳಗುಂಬ ಸೇರಿದಂತೆ ನಗರದ ವ್ಯಾಪ್ತಿಯಲ್ಲಿರುವ ಠಾಣೆಗಳ 84 ರೌಡಿಶೀಟರ್ ಗಳ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ನಂತರ ಚಿಲುಮೆ ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು.
ರೌಡಿ ಚಟುವಟಿಕೆ ನಡೆಸುತ್ತಿದ್ದವರಿಗೆ ಚಳಿ ಬಿಡಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಠಿಣವಾಗಿ
ಎಚ್ಚರಿಕೆ ನೀಡಿದರು.
ಅಪರಾಧ ಚಟುವಟಿಕೆಯಿಂದ ದೂರ ಉಳಿದು ನೆಮ್ಮದಿಯ ಜೀವನವನ್ನು ನಡೆಸುವಂತೆ ತಾಕೀತು ಮಾಡಿದರು.
ಸಮಾಜದಲ್ಲಿ ನೆಮ್ಮದಿಯ ವಾತಾವರಣವನ್ನು ಕೆಡಿಸಲು ಯತ್ನಿಸಿದರೆ ಜೈಲಿಗೆ ಅಟ್ಟುವುದಾಗಿ ವಾರ್ನಿಂಗ್ ಮಾಡಿದರು.
ಯಾವುದೋ ಕಾರಣಕ್ಕೆ ಅಪರಾಧ ಜಗತ್ತಿನೊಂದಿಗೆ ಗುರುತಿಸಿಕೊಂಡಿದ್ದೀರಿ, ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದೀರಿ ಇನ್ನು ಸಾಕು, ನೆಮ್ಮದಿಯಿಂದ ಬದುಕಿ.
ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಿದರೆ ರೌಡಿಶೀಟರ್ ಪಟ್ಟಿಯಿಂದ ಕೈಬಿಡುವುದಾಗಿ ಭರವಸೆ ನೀಡಿದರು. ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ಡಿವೈಎಸ್ಪಿ ಶ್ರೀನಿವಾಸ್, ಸರ್ಕಲ್ ಇನ್ ಸ್ಪೆಕ್ಟರ್ ಗಳಾದ ಮುನಿರಾಜು, ನವೀನ್, ಇನ್ ಸ್ಪೆಕ್ಟರ್ ಗಳಾದ ನವೀನ್, ಮೂರ್ತಿ ಹಾಗೂ ನಗರದ ಎಲ್ಲ ಠಾಣೆಗಳ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.