ಮೈಸೂರು: ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ.ಪಡೆದು ಕೆಲಸ ನೀಡದೆ ವಂಚಿಸಿದ್ದ ಮೂವರನ್ನು ಸಿಇಎನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕೊರೋನಾದಿಂದ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬರು ಗೂಗಲ್ ಸರ್ಚ್ ನಲ್ಲಿ ಕೆಲಸ ಹುಡುಕುತ್ತಿದ್ದ ವೇಳೆ ಎಮಿನೆಂಟ್ ಮೈಂಡ್ ಎಂಬ ವೆಬ್ ಸೈಟ್ ಕುರಿತು ತಿಳಿದುಕೊಂಡರು.
ನಂತರ ನವೆಂಬರ್ 5 2020ರಿಂದ4.4.2022ರವರೆಗೆ 48,80,200ರೂ.ಗಳನ್ನು ಎಮಿನೆಂಟ್ ಮೈಂಡ್ ವಿ ಸೋರ್ಸ್ ಹಾಗೂ ವಿವಿಧ ಖಾತೆಗಳಿಗೆ ಕಳುಹಿಸಿದ್ದರು.
ಆದರೆ ಅವರು ಯಾವುದೇ ಕೆಲಸ ಕೊಡದೇ ವಂಚಿಸಿದ್ದಾರೆಂದು ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಪರ ಪೊಲೀಸ್ ಅಧೀಕ್ಷಕ ಆರ್.ಶಿವಕುಮಾರ್ ಮಾರ್ಗದರ್ಶನದಲ್ಲಿ ಸೆನ್ ಪೊಲೀಸ್ ಠಾಣೆಯ ಪಿಐ ಶಬ್ಬೀರ್ ಹುಸೇನ್ ನೇತೃತ್ವದ ತಂಡವು ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ನಾಲ್ಕು ಜನ ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ 7ಸ್ಯಾಂಸಂಗ್ ಕೀ ಪ್ಯಾಡ್ ಮೊಬೈಲ್ ಗಳು, 4ಸ್ಮಾರ್ಟ್ ಫೋನ್ ಗಳು, 11ಸಿಮ್ ಕಾರ್ಡ್ ಗಳು, 2ಲ್ಯಾಪ್ ಟಾಪ್ ಗಳು, 1 ಕಛೇರಿಯ ಸೀಲುಗಳು ಹಾಗೂ 24ಲಕ್ಷರೂಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಮಂಜುನಾಥ್ ಎಸ್, ರಂಸ್ವಾಮಿ, ಮಂಜುನಾಥ್ ಬಿ.ವಿ, ಮಹೇಶ್, ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ಮಹದೇವಸ್ವಾಮಿ, ಮಂಜುನಾಥ್ ಎಂ.ಎಸ್, ಅಭಿಷೇಕ್, ಮಹೇಶ್ ಕುಮಾರ್, ಸಿಂಧು, ಪುಷ್ಪಲತಾ ಪಾಲ್ಗೊಂಡಿದ್ದರು.