ಚಾಮರಾಜನಗರ : ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 80ರ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸುವ ಮೂಲಕ ನಿವೃತ್ತಿ ಮುನ್ಸೂಚನೆ ನೀಡಿದ್ದಾರೆ.
ಮಾಧ್ಯಮ ಪ್ರತ ನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಶಾಸಕನಾಗಿ 39 ವರ್ಷ ಪೂರೈಸಿದ್ದೇನೆ. ಮುಂದಿನ 5 ವರ್ಷ ಅಧಿಕಾರ ಮುಗಿಯುವುದರೊಳಗೆ ನನಗೆ 80 ವರ್ಷ ಕಳೆಯುತ್ತದೆ. ಹಾಗಾಗಿ 2023ರ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ಸ್ಪಷ್ಟಪಡಿಸಿದರು.
ನಾನು ಶಾಲೆಗೆ ಸೇರುವಾಗ ಅಂದಿನ ಮುಖ್ಯಶಿಕ್ಷಕರಾಗಿದ್ದ ರಾಜಪ್ಪ ಅವರು ಕೊಟ್ಟ ದಿನಾಂಕವೇ ನನ್ನ ಜನ್ಮದಿನಾಂಕವಾಗಿದೆ ಎಂದು ಸಿದ್ದು ಹೇಳಿದರು.
ನನ್ನ ಹಿತೈಷಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ಒಟ್ಟಾಗಿ ಸೇರಿ 75ನೇ ಜನ್ಮ ದಿನಾಚರಣೆಯನ್ನು ದಾವಣಗೆರೆಯಲ್ಲಿ ಆಚರಿಸುತ್ತಿದ್ದಾರೆ.
ಸಿದ್ದರಾಮೋತ್ಸವ ಎಂಬುದಾಗಿ ಆರ್‌ಎಸ್‌ಎಸ್ ನವರು ಕರೆದಿದ್ದಾರೆ. ಸಿದ್ದರಾಮೋತ್ಸವ ಅಂಥಾ ಎಲ್ಲೂ ಇಲ್ಲ. ಆ ರೀತಿ ಉತ್ಸವ ನಡೆಯೋದೂ ಇಲ್ಲ. ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತಿದೆ ಎಂದು ಸಿದ್ದು ಸ್ಪಷ್ಟಪಡಿಸಿದರು.