ಇಬ್ಬರು ವ್ಯಕ್ತಿಗಳನ್ನು ವಂಚಿಸಿದ ಚಾಲಾಕಿ ಮೋಸಗಾರರು

ಮೈಸೂರು: ಮೋಸ ಹೋಗೋರು ಇರೋತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ.ಇದಕ್ಕೆ ಉದಾಹರಣೆ ಎಂಬಂತೆ ಮೈಸೂರಿನಲ್ಲಿ ಎರಡು ಘಟನೆಗಳು ನಡೆದಿದೆ.

ಮೊದಲ ಪ್ರಕರಣದಲ್ಲಿ ವೆಬ್ ಸೈಟ್ ಡೆವಲಪ್ ಮಾಡಿಕೊಡುವುದಾಗಿ ಹೇಳಿ ಡೆವಲಪ್ ಮಾಡೊಕೊಟ್ಟು ನಂತರ ಕ್ರೆಡಿಟ್ ಕಾರ್ಡ್ ನಿಂದ 1.70ಲಕ್ಷರೂ. ದೋಚಿರುವ ಘಟನೆ ಮೈಸೂರಿನ ಸಿದ್ದಾರ್ಥ ನಗರದಲ್ಲಿ ನಡೆದಿದೆ.

ಇನ್ನೊಂದು ಪ್ರಕರಣ ಆಯುರ್ವೇದ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆಯುವ ನೆಪದಲ್ಲಿ 85ಸಾವಿರ ರೂ.ವಂಚಿಸಿರುವ ಘಟನೆ ಕೆ.ಆರ್.ಮೊಹಲ್ಲಾದಲ್ಲಿ ನಡೆದಿದೆ.

ಸಿದ್ಧಾರ್ಥ ನಗರದ ಉದ್ಯಮಿ ಅಮರ್ ಕುಮಾರ್(44)ಎಂಬವರಿಗೆ ಧರ್ಮೆಂದ್ರ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ ತನ್ನನ್ನು ಸಾಫ್ಟ್ ವೇರ್ ಡಿಸೈನರ್ ಎಂದು ಪರಿಚಯಿಸಿಕೊಂಡು ಅವರಿಗೆ ವೆಬ್ ಸೈಟ್ ಡೆವಲಪ್ ಮಾಡಿಕೊಟ್ಟಿದ್ದ.

ನಂತರ ಆನ್ ಲೈನ್ ವಹಿವಾಟು ನಡೆಸಲು ಅಮರ್ ಕುಮಾರ್ ಅವರ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು 1.70ಲಕ್ಷರೂ. ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆ .

ಈ ಕುರಿತು ನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ಕೆ.ಆರ್.ಮೊಹಲ್ಲಾ ರಾಮಯ್ಯ ರಸ್ತೆ ನಿವಾಸಿ ಆಯುರ್ವೇದ ವೈದ್ಯ ಡಾ.ಮಹಮ್ಮದ್ ಚಾಂದ್ (48) ಎಂಬವರಿಗೆ ಶ್ರೀಕಾಂತ್ ಶರ್ಮಾ ಎಂಬ ಹೆಸರಿನ ವ್ಯಕ್ತಿ ಕರೆ ಮಾಡಿ ತನ್ನ ತಂದೆಗೆ ಫಿಸ್ತೂಲ ಖಾಯಿಲೆ ಇದ್ದು ಸರಿಪಡಿಸುವಂತೆ ಕೇಳಿಕೊಂಡಿದ್ದ.

ತನಗೆ ಮೆಡಿಕಲ್ ರಿಫಂಡ್ ಆಗುತ್ತದೆ. ಅದರ ಪ್ರೊಸೀಜರ್ ಗಾಗಿ ಫೋನ್ ಪೇ ಓಪನ್ ಮಾಡಲು ತಿಳಿಸಿದ್ದ.

ವೈದ್ಯರು ತಮ್ಮ ಮಗಳ ಫೋನ್ ಪೇ ಖಾತೆ ಓಪನ್ ಮಾಡಿ ಆತ ಹೇಳಿದಂತೆ ಮಾಡಿದಾಗ ಖಾತೆಯಿಂದ 85 ಸಾವಿರ ವರ್ಗಾವಣೆಯಾಗಿದೆ.

ಈ ಕುರಿತು ನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.